ರಾಜ್ಯದ ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆಳೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಇಡೀ ವರ್ಷ ಹೋರಾಟ ನಡೆಸಲಾಗುವುದು : ಡಿ.ಕೆ.ಶಿವಕುಮಾರ್ -Vishwanews24

Featured, ರಾಜ್ಯ ನ್ಯೂಸ್

ರಾಜ್ಯದ ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆಳೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಇಡೀ ವರ್ಷ ಹೋರಾಟ ನಡೆಸಲಾಗುವುದು : ಡಿ.ಕೆ.ಶಿವಕುಮಾರ್ -Vishwanews24

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆಳೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಇಡೀ ವರ್ಷ ಹೋರಾಟ ನಡೆಸಲಾಗುವುದು. ಸರ್ಕಾರದ ತೆರಿಗೆ ಹೆಚ್ಚಳ ನೀತಿಯ ವಿರುದ್ಧ ನಿರಂತರ ಧ್ವನಿ ಎತ್ತಲಾಗುವುದು ಎಂದು ಕೆಪಿಸಿಸ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿಬಿಎಂಪಿ ವಿರುದ್ಧ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 2021ನ್ನು ಹೋರಾಟ ಮತ್ತು ಸಂಘಟನಾತ್ಮಕ ವರ್ಷ ಎಂದು ಘೋಷಣೆ ಮಾಡಿದ್ದೇವೆ. ಹೀಗಾಗಿ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ, ಅಲ್ಲಿ ಸ್ಥಳೀಯವಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಅದನ್ನು ಬಗೆಹರಿಸಲು ಪ್ರತಿಭಟನೆ ಮಾಡುತ್ತೇವೆ. ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ. ಸರ್ಕಾರಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ. ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಗರದ ಒಂದೂವರೆ ಕೋಟಿ ಜನ ಪಾವತಿಸುವ ತೆರಿಗೆಯಿಂದ ರಾಜ್ಯದ ಮುಕ್ಕಾಲು ಭಾಗದ ಜನರ ಸೌಲಭ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬೆಂಗಳೂರಿಗೆ ಸ್ವಚ್ಛ, ಹಸಿರು ನಗರ ಎಂಬೆಲ್ಲಾ ಹೆಸರಿತ್ತು. ಕೆಂಪೇಗೌಡರು ಕಟ್ಟಿರುವ ಈ ನಾಡಿನಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದಾರೆ. ಆದರೆ, ಬಿಜೆಪಿ ಆಡಳಿತ ಬಿಬಿಎಂಪಿ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಚುನಾವಣೆ ನಡೆಸಲೂ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ಎಲ್ಲದಕ್ಕೂ ಲಂಚ ಕೊಡಬೇಕಿದೆ. ಕಚೇರಿಯ ಬಾಗಿಲು ಮುಟ್ಟಲೂ ಒಂದು ರೇಟ್ ಫಿಕ್ಸ್ ಆಗಿದೆ. ಕೊರೊನಾ ಸಂದರ್ಭದಲ್ಲಂತೂ ಲೂಟಿ ಹೊಡೆಯಲಾಗಿದೆ. ಕೊರೊನಾ ಸಂದರ್ಭದಲ್ಲಿ ವ್ಯಾಪಾರ ವಹಿವಾಟುಗಳು ಮುಚ್ಚಿ ಹೋಗಿವೆ. ಉದ್ಯೋಗ ವಿಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಲಾಕ್‍ ಡೌನ್, ಸೀಲ್‍ ಡೌನ್ ಹೆಸರಿನಲ್ಲಿ ಮತ್ತಷ್ಟು ತೊಂದರೆ ಮಾಡಲಾಗಿದೆ. ಬ್ಯಾಂಕ್ ಮೂಲಕ ಸಹಾಯ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಈವರೆಗೂ ಯಾರಿಗೂ ನೆರವು ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

http://ಬಂಟಕಲ್ ಕಾಲೇಜಿನ ಪ್ರಾಧ್ಯಾಪಕ ಶ್ರೀ ರಾಮಮೂರ್ತಿಯವರಿಗೆ ಉತ್ತಮ ಶಿಕ್ಷಕ ಮತ್ತು ಉತ್ತಮ ಸಂಶೋಧಕ ಪ್ರಶಸ್ತಿ -Vishwanews24