ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಳಸುವಂತಿಲ್ಲ : ಕೋಟ ಶ್ರೀನಿವಾಸ ಪೂಜಾರಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ದೇವಸ್ಥಾನದಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಕಂಡು ಬರುತ್ತಿರುವುದರಿಂದ ಇದಕ್ಕೆ ಬ್ರೇಕ್ ಹಾಕಲು ಮುಜರಾಯಿ ಇಲಾಖೆ ಮುಂದಾಗಿದೆ.

ಮುಜರಾಯಿ ಇಲಾಖೆಯ ದೇಗುಲದಲ್ಲಿ ನೈಸರ್ಗಿಕ ಕುಂಕುಮ, ಶ್ರೀಗಂಧ ಬಳಸುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಸುತ್ತಿರುವ ಬಗ್ಗೆ ಭಕ್ತರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ ಸಮಸ್ಯೆ ಗಳಿಗೂ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಿಂದ ಅಲರ್ಜಿ (ಬಿಂದಿ ಡರ್ಮಟೈಟಿಸ್‌) ಉಂಟಾಗುವ ಸಾಧ್ಯತೆ ಇದೆ. ಇದರಿಂದ ಕುಂಕುಮ ಹಚ್ಚಿ ಕೊಂಡ ಭಾಗದಲ್ಲಿ ಕೆರೆತ, ಸಣ್ಣ ನೀರಿನ ಗುಳ್ಳೆ ಕಾಣಿಸಿಕೊಳ್ಳಬಹುದು. ಇಂತಹ ಕುಂಕುಮಗಳಿಂದ ಜೀವಕಣ ಗಳು ನಾಶವಾಗಿ ಕ್ರಮೇಣ ಆ ಭಾಗ ಬೆಳ್ಳಗಾಗಲಿದೆ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.

ಶುದ್ಧ ನೈಸರ್ಗಿಕವಾದ ಗಂಧ, ಕುಂಕುಮವನ್ನು ದೇವರ ಅರ್ಚನೆಗೆ ಬಳಸಬೇಕು. ಹಾಗೂ ಭಕ್ತರಿಗೂ ಇದನ್ನೇ ನೀಡಬೇಕು ಎಂದು ನಿರ್ದೇಶಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 36 ಸಾವಿರ ದೇವಸ್ಥಾನಗಳಿವೆ. ಈ ಪೈಕಿ 15 ಸಾವಿರ ದೇಗುಲಗಳಿಗೆ ಉತ್ತಮ ಆದಾಯವಿದೆ. ಇಂತಹ ಪ್ರತಿಷ್ಠಿತ ದೇಗುಲಗಳಿಗೆ ಭಕ್ತಾದಿಗಳೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಿಂದ ಚರ್ಮಕ್ಕೆ ಸಂಬಂಧಪಟ್ಟಂತೆ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಭಕ್ತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದ ಯಾವುದೇ ದೇವಸ್ಥಾನದಲ್ಲಿಯೂ ರಾಸಾಯನಿಕ ಯುಕ್ತವಾದಂತ ಕುಂಕುಮ ಮಾರಾಟವನ್ನು ಮಾರಾಟಗಾರರು ಇಂದಿನಿಂದ ನಿಲ್ಲಿಸಬೇಕು. ಒಂದು ವೇಳೆ ಗಮನಕ್ಕೆ ಬಂದರೇ ಅಂತಹ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ರಾಸಾಯನಿಕ ಯುಕ್ತ ಶ್ರೀಗಂಧ ಕೂಡ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಲ್ಲದೇ, ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.