ಲೋಕಸಭೆ ಚುನಾವಣೆ : ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗೆಲುವು ದಾಖಲಿಸಿದರೂ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ : ಶರದ್‌ ಪವಾರ್‌ – Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗೆಲುವು ದಾಖಲಿಸಿದರೂ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗುವುದಿಲ್ಲ ಎಂದು ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಸಲದ ಲೋಕಸಭಾ ಚುನಾವಣೆ ಫಲಿತಾಂಶ ಅಚ್ಚರಿ ಉಂಟುಮಾಡಲಿದೆ, ಬಿಜೆಪಿಗೆ ಅಗತ್ಯ ಸಂಖ್ಯಾ ಬಲದ ಕೊರತೆ ಎದುರಾಗಲಿದೆ,  ಒಂದು ವೇಳೆ ಬಿಜೆಪಿ ಇತರೆ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿದರೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಾರರು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ಅಧಿಕಾರ ರಚನೆಗೆ ಮೈತ್ರಿ ಪಕ್ಷಗಳ ಬೆಂಬಲ ಅತ್ಯಗತ್ಯ ಎಂದು ಹೇಳಿರುವ ಶರದ್ ಪವಾರ್, ನರೇಂದ್ರ ಮೋದಿ 2ನೇ ಬಾರಿಗೆ ಪ್ರಧಾನಿಯಾಗಲು ಸಾಧ್ಯವಿಲ್ಲ. ಬಿಜೆಪಿಗೆ ಬೆಂಬಲ ನೀಡುವ ಇತರೆ ಪಕ್ಷಗಳು ನರೇಂದ್ರ ಮೋದಿ ಹೊರತಾಗಿ ಬೇರೆ ನಾಯಕರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಬಹುದು ಎಂದು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ 326 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 283 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿತ್ತು.