ವಂಶ ಪಾರಂಪರ್ಯದ ಹೆಸರಿನಲ್ಲಿ ನಡೆಯುವ ರಾಜಕಾರಣ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು : ಪ್ರಧಾನಿ ಮೋದಿ -Vishwanews24
ವಂಶ ಪಾರಂಪರ್ಯದ ಹೆಸರಿನಲ್ಲಿ ನಡೆಯುವ ರಾಜಕಾರಣ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು : ಪ್ರಧಾನಿ ಮೋದಿ –Vishwanews24
ನವದೆಹಲಿ: ವಂಶ ಪಾರಂಪರ್ಯದ ಹೆಸರಿನಲ್ಲಿ ನಡೆಯುವ ರಾಜಕಾರಣ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು. ಇಂತಹ ರಾಜಕಾರಣವನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ನಡೆದ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ‘ಯುವಜನತೆ ರಾಜಕೀಯ ಪ್ರವೇಶಿಸುವುದು ಅಗತ್ಯ. ಒಂದು ವೇಳೆ ಯುವಜನತೆ ರಾಜಕೀಯಕ್ಕೆ ಧುಮುಕದೇ ಇದ್ದಲ್ಲಿ ವಂಶ ಪಾರಂಪರ್ಯ ರಾಜಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ತಿಳಿಸಿದರು.
‘ತಮ್ಮ ವಂಶದ ಅಡ್ಡಹೆಸರಿನ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದವರ ಸಂಖ್ಯೆ ಈಗ ಕ್ಷೀಣಿಸುತ್ತಿದೆ. ಕೆಲವರು ಕುಟುಂಬವನ್ನು ರಕ್ಷಿಸುವ ಸಲುವಾಗಿಯೇ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ರಾಜಕೀಯವನ್ನು ಕಾಯಿಲೆಯಿಂತೆ ಕಾಡುತ್ತಿರುವ ವಂಶ ಪಾರಂಪರ್ಯ ರಾಜಕಾರಣವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಅಗತ್ಯ’ ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ವಿವೇಕಾನಂದರ ವಿಚಾರಗಳು ಪ್ರೇರಣೆಯಿಂದ ಕೂಡಿವೆ. ಸಂವಿಧಾನದ ರಚನೆಗೆ ಸಾಕ್ಷಿಯಾದ ಸಂಸತ್ತಿನ ಕೇಂದ್ರ ಹಾಲ್ ನಲ್ಲಿ ಯುವ ಸಂಸತ್ ಉತ್ಸವ ನಡೆಯುತ್ತಿರುವುದು ಈ ದಿನದ ಮಹತ್ವವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರ ನಿರ್ಮಾಣದತ್ತ ಪ್ರಮುಖ ಹೆಜ್ಜೆಯಾಗಿದೆ. ನಾವು ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದು, ಇದು ನಮ್ಮ ಯುವಕರಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.
