ಶಬರಿಮಲೆ ತೀರ್ಪು ಹಿನ್ನಲೆ : ಸೋಮವಾರ ಕೇರಳ ಬಂದ್ಗೆ ಕರೆನೀಡಿದ ಶಿವಸೇನೆ
ತಿರುವನಂತಪುರಂ,: ಕೇರಳದ ಶಬರಿಮಲೆ ದೇವಸ್ಥಾನದ ಒಳಗೆ ಎಲ್ಲ ವಯೋಮಾನದ ಮಹಿಳೆಯರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡುವಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ನ ಈ ತೀರ್ಪನ್ನ ಹಲವರು ಸ್ವಾಗತಿಸಿದರೆ, ಇನ್ನೂ ಹಲವರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
ಇದೀಗ ಕೇರಳದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ಅಕ್ಟೋಬರ್ 1 ರಂದು ಶಿವಸೇನೆಯು ಕೇರಳ ಬಂದ್ ಗೆ ಕರೆನೀಡಿದೆ. ಈ ಸಂಬಂಧ ಇತರ ಧಾರ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ ತೀರ್ಪನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸುತ್ತೇವೆಂದು ಶಿವಸೇನೆ ರಾಜ್ಯ ಮುಖ್ಯಸ್ಥ ಭುವನೇಶ್ವರಾ ಚಂದ್ರ ಹೇಳಿದ್ದಾರೆ.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ದೇಶಾದ್ಯಂತ ಬಹುಚರ್ಚಿತ ವಿಷಯವಾಗಿದೆ. ಅದರಲ್ಲೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಿಂದ ಶಬರಿಮಲೆಗೆ ಲಕ್ಷಾಂತರ ಭಕ್ತರು ಪ್ರತಿವರ್ಷ ದರ್ಶನಕ್ಕಾಗಿ ಹೋಗುತ್ತಾರೆ. ಹೀಗಾಗಿ, ಕರ್ನಾಟಕದ ಭಕ್ತರ ವಲಯದಲ್ಲೂ ತೀರ್ಪು ನೋವನ್ನುಂಟುಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕೋರ್ಟ್ ತೀರ್ಪನ್ನು ವಿರೋಧಿಸುವ ಸಂಘಟನೆಗಳು ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. 800 ವರ್ಷಗಳ ಅಯ್ಯಪ್ಪ ದೇವಾಲಯದ ಇತಿಹಾಸದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಋತುಮತಿಯಾಗುವ ಹೆಣ್ಣು ಮಕ್ಕಳು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಈ ದೇವಾಲಯದ ಆಡಳಿತ ಮಂಡಳಿಯೇ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.
ಆದರೆ ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಸುಪ್ರೀಂ ತೀರ್ಪನ್ನು ಹಲವರು ಖಂಡಿಸಿದ್ದಾರೆ.

