ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರ ಪ್ರವೇಶ..

Featured, ರಾಷ್ಟ್ರ ನ್ಯೂಸ್

ತಿರುವನಂತಪುರಂ:ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಪ್ರವೇಶಿಸುವ ಮೂಲಕ ಇಂದು ಇಬ್ಬರು ಮಹಿಳೆಯರು ಇತಿಹಾಸ ಸೃಷ್ಟಿ ಮಾಡಿದ್ದಾರೆ. . 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ದೇವಾಲಯವನ್ನು ಇಂದು ಬೆಳಗ್ಗೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಧ್ಯರಾತ್ರಿ ಬೆಟ್ಟವನ್ನು ಹತ್ತಲು ಆರಂಭಿಸಿದ ಮಹಿಳೆಯರು ಇಂದು ಬೆಳಗ್ಗೆ 3.45ರ ವೇಳೆಗೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಮಹಿಳೆಯರಿಗೆ ಸಮವಸ್ತ್ರ ಧರಿಸಿದ್ದ ಪೊಲೀಸರು ರಕ್ಷಣೆ ನೀಡಿದ್ದಾರೆ.

ಡಿಸೆಂಬರ್ ನಲ್ಲಿ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿಲು ಪ್ರಯತ್ನ ನಡೆಸಿದ್ದರು. ಆದರೆ ಈ ವೇಳೆ ಭಾರೀ ಪ್ರತಿಭಟನೆ ನಡೆದ ಪರಿಣಾಮ ದೇವಾಲಯ ಪ್ರವೇಶಿಸುವ ನಿರ್ಧಾರದಿಂದ ಮಹಿಳೆಯರು ಹಿಂದಕ್ಕೆ ಸರಿದಿದ್ದರು.

ಇದಲ್ಲದೆ ಮಹಿಳೆಯರು ದೇಗುಲ ಪ್ರವೇಶಿಸಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಧೃಡಪಡಿಸಿದ್ದಾರೆ. ಮಹಿಳೆಯರಿಬ್ಬರು ದೇವಾಲಯ ಪ್ರವೇಶಿಸಿದ ಹಿನ್ನಲೆಯಲ್ಲಿ ಅಯ್ಯಪ್ಪ ಭಕ್ತ ವಲಯದಲ್ಲಿ ಆಕ್ರೋಶ ಬುಗಿಲೆದ್ದಿದೆ.

ಸುಪ್ರೀಂ ಕೋರ್ಟ್ ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ ನೀಡಿದ ನಂತರ ಸಾಕಷ್ಟು ಹೋರಾಟಗಳು ನಡೆದಿತ್ತು. ಹಿಂದೂ ಸಂಘಟನೆಗಳು ತೀರ್ಪನ್ನು ವಿರೋಧಿಸಿ ಕೇರಳ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದ್ದರೆ, ಮಹಿಳಾ ಪರ ಸಂಘಟನೆಗಳು ತೀರ್ಪನ್ನು ಸ್ವಾಗತಿಸಿತ್ತು.