ಶಾಂತಿ ಸ್ಥಾಪನೆಗೆ ಒಂದು ಅವಕಾಶ ಕೊಡಿ : ಪ್ರಧಾನಿಗೆ ಇಮ್ರಾನ್ ಮನವಿ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್
ಇಸ್ಲಾಮಾಬಾದ್: ಪುಲ್ವಾಮಾ ಭಯೋತ್ಪಾದಕ ದಾಳಿ ಬಗ್ಗೆ ಭಾರತ ಕ್ರಿಯಾಶೀಲ ಗುಪ್ತಚರ ಒದಗಿಸಿದರೆ ಪಾಕಿಸ್ತಾನ ತಕ್ಷಣವೇ ಅದಕ್ಕೆ ಪ್ರತಿಕ್ರಿಯೆ ನೀಡಲಿದೆ. ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಶಾಂತಿಗೆ ಒಂದು ಅವಕಾಶ ನೀಡಿ, ನಾನು ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ. ಪುಲ್ವಾಮಾ ದಾಳಿಯ ಕುರಿತು ಭಾರತ ಸಾಕ್ಷ್ಯ ನೀಡಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜಸ್ತಾನದಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದಾಗ, ಭಯೋತ್ಪಾದನೆ ವಿರುದ್ಧ ಇಡೀ ವಿಶ್ವದಲ್ಲಿ ಸಹಮತ ವ್ಯಕ್ತವಾಗಿದೆ. ಭಯೋತ್ಪಾದನೆ ನಡೆಸುವವರನ್ನು ಮತ್ತು ಅದಕ್ಕೆ ಕುಮ್ಮಕ್ಕು ನೀಡುವವರನ್ನು ಶಿಕ್ಷಿಸಲು ನಾವು ಮುಂದಡಿ ಇಡುತ್ತಿದ್ದೇವೆ. ಈ ಬಾರಿ ಭಯೋತ್ಪಾದನೆ ವಿರುದ್ಧ ಹೋರಾಡುವ ಸೂಕ್ತ ಸಮಯ ಬಂದಿದೆ. ಭಾರತ ಬದಲಾಗುತ್ತಿದೆ. ಸೈನಿಕರು ಹುತಾತ್ಮರಾದ ನೋವನ್ನು ಮರೆಯಲು ಸಾಧ್ಯವಿಲ್ಲ. ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡಬೇಕೆಂದು ಮತ್ತು ಅದನ್ನು ಹೇಗೆ ಮಟ್ಟ ಹಾಕಬೇಕೆಂದು ನಮಗೆ ಗೊತ್ತಿದೆ ಎಂದು ಹೇಳಿದ್ದರು.
ನಾನು ಪ್ರಧಾನಿಯಾದಾಗ ನರೇಂದ್ರ ಮೋದಿ ಅವರಿಗೆ ಮಾತು ಕೊಟ್ಟಿದ್ದೆ. ಬಡತನ ಮತ್ತು ಅನಕ್ಷರಸ್ಥತೆಯ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಶಾಂತಿಗೆ ಒಂದು ಅವಕಾಶ ನೀಡಿ. ಪುಲ್ವಾಮಾ ದಾಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ” ಎಂದು ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.