‘ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲದೆ ಮುಸ್ಲೀಮರಿಗೂ ಪೂರ್ವಜ’ : ಬಾಬಾ ರಾಮ್‌ದೇವ್‌ – Vishwanews24

Featured, ರಾಷ್ಟ್ರ ನ್ಯೂಸ್

ಗುಜರಾತ್‌: ರಾಮಮಂದಿರ ನಿರ್ಮಾಣ ಆಗಲೇಬೇಕು. ರಾಮಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಸಾಧ್ಯವಿಲ್ಲವಾದರೇ ಇನ್ನೇನು ಮೆಕ್ಕಾದಲ್ಲಿಯೋ.. ವ್ಯಾಟಿಕನ್‌ ಸಿಟಿಯಲ್ಲಿಯೋ ನಿರ್ಧರಿಸಲು ಸಾಧ್ಯವೇ? ಎಂದು ಯೋಗಗುರು ಬಾಬಾ ರಾಮ್‌ದೇವ್‌ ಅವರು ಪ್ರಶ್ನಿಸಿದ್ದಾರೆ.

ಯೋಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ, ‘ಅಯೋಧ್ಯೆ ರಾಮ ಜನ್ಮಭೂಮಿ ಎಂಬುದು ನಿರ್ವಿವಾದಿತ ಸತ್ಯ. ಇದು ರಾಜಕಾರಣದ ವಿಷಯವಲ್ಲ ಅಥವಾ ಮತಬ್ಯಾಂಕ್‌ ರಾಜಕೀಯವೂ ಅಲ್ಲ. ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲದೆ ಮುಸ್ಲೀಮರಿಗೂ ಪೂರ್ವಜ’ ಎನ್ನುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

‘ಸಂಸತ್ತು ಅಥವಾ ಸುಪ್ರೀಂ ಕೋರ್ಟ್‌ ಅಯೋಧ್ಯೆ ವಿಚಾರದಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ದೇವಾಲಯ ನಿರ್ಮಾಣಕ್ಕಾಗಿ ಒಟ್ಟಾಗಿ ನಡೆಯುವ ಅಗತ್ಯವಿದ್ದರೆ ಹಿಂದೂಗಳು ಸಿದ್ಧ. ಅಂತಹ ಸಂದರ್ಭ ಒದಗಿಬಂದರೆ ದೇಶದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಅಪಾಯಕ್ಕೆ ಸಿಲುಕಲಿದೆ’ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದರು.

ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ 2010ರಲ್ಲಿ ತೀರ್ಪು ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌, ವಿವಾದಿತ ಭೂಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಸಮನಾಗಿ ಹಂಚಿಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.