ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದ ದೇಯಿ ಬೈದ್ಯೆತಿ, ಸಾಯನ ಬೈದ್ಯ, ಕೋಟಿ – ಚೆನ್ನಯರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ -Vishwanews24
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದ ದೇಯಿ ಬೈದ್ಯೆತಿ, ಸಾಯನ ಬೈದ್ಯ, ಕೋಟಿ – ಚೆನ್ನಯರ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ
ಪುತ್ತೂರು: ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್ನಲ್ಲಿ ಫೆ. 28ರಂದು ಪ್ರಧಾನ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕವು ಬೆಳಗ್ಗಿನಿಂದಲೇ ಹರಿದು ಬಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ತಂತ್ರಿ ಎಂ.ಕೆ. ಲೋಕೇಶ್ ಶಾಂತಿ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ ಗಣಪತಿ ಹೋಮ, ಶಿಖರ ಪ್ರತಿಷ್ಠೆ, ಬೆರ್ಮೆರ್ ಗುಂಡದಲ್ಲಿ ಬೆರ್ಮೆರ್ ಶಿಲಾ ಸ್ಥಾಪನೆ, ಬೆಳಗ್ಗೆ 8.04ರ ಮೀನ ಲಗ್ನ ಸುಮುಹೂರ್ತದಲ್ಲಿ ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ಬಿಂಬ ಪ್ರತಿಷ್ಠೆ, ಸಾಯನ ಬೈದ್ಯರ ಗುರುಪೀಠ ಸ್ಥಾಪನೆ, ಮೂಲಸ್ಥಾನ ಗರಡಿಯಲ್ಲಿ ಗುರು ಸಾಯನ ಬೈದ್ಯರು, ಕೋಟಿ ಚೆನ್ನಯರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಸತ್ಯಧರ್ಮ ಚಾವಡಿಯಲ್ಲಿ ನೈವೇದ್ಯ, ಮಹಾಪೂಜೆ ನಡೆಯಿತು.
ಮಧ್ಯಾಹ್ನ ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ಧೂಮಾವತಿ ಸಾನ್ನಿಧ್ಯದಲ್ಲಿ ನವಕ ಪ್ರಧಾನ ಹೋಮ, ಧ್ವಜಪೂಜೆ, ಧ್ವಜಾರೋಹಣದ ಬಳಿಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಅನಾವರಣಗೊಂಡಿತು.
ಸತ್ಯಧರ್ಮ ಚಾವಡಿಯಲ್ಲಿ ಶುಕ್ರವಾರ ವೈದಿಕ ವಿಧಿ ವಿಧಾನಗಳೊಂದಿಗೆ ಮಾತೆ ದೇಯಿ ಬೈದ್ಯೆತಿ ಬಿಂಬ ಪ್ರತಿಷ್ಠೆ ಮಾಡಲಾಯಿತು. ಸಾಯನ ಬೈದ್ಯರ ಗುರುಪೀಠ ಸ್ಥಾಪನೆ ಮಾಡಲಾಯಿತು.
ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ ಲ್ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವು ಶುಕ್ರವಾರಕ್ಕೆ ಮುಕ್ತಾಯಗೊಂಡಿದ್ದು, ಶನಿವಾರದಿಂದ ನೇಮ ನಡೆಯಲಿದೆ.
ಫೆ. 29ರ ಬೆಳಗ್ಗೆ ಮಹಾಮಾತೆ ದೇಯಿ ಬೈದ್ಯೆತಿ ಮಹಾ ಸಮಾಧಿಯಲ್ಲಿ ಆರಾಧನಾ ಮಹೋತ್ಸವ, ಅನಂತರ ಧೂಮಾವತಿ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕುಪ್ಪೆ ಪಂಜುರ್ಲಿ ಸಾನ್ನಿಧ್ಯದಲ್ಲಿ ಕಲಶ ಹೋಮ, ರಾತ್ರಿ ಕುಪ್ಪೆ ಪಂಜುರ್ಲಿ ನೇಮ, ಕಲ್ಲಾಲ್ದಾಯ ಕೋಲ, ರವಿವಾರ ಮುಂಜಾನೆ ಕೊರತಿ ದೈವದ ಕೋಲ ನಡೆಯಲಿದೆ.
ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್ನಲ್ಲಿ ಜಿಲ್ಲೆ, ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವು ಶುಕ್ರವಾರ ನಡೆಯಿತು. ಕ್ಷೇತ್ರದಲ್ಲಿ ಶನಿವಾರದಿಂದ ನೇಮ ನಡೆಯಲಿದೆ.
“ಸತ್ಯೊಡು ಬತ್ತಿನಕ್ಲೆಗ್ ತಿಗಲೆಡ್ ಸಾದಿ ತೋಜಾವ, ಅನ್ಯಾಯೊಡು ಬತ್ತಿನಕ್ಲೆಗ್ ಸುರಿಯೊಡು ಸಾದಿ ತೋಜಾವ’ ಎಂಬ ಅಮರ ವಾಕ್ಯವನ್ನು ಐನೂರು ವರ್ಷಗಳ ಹಿಂದೆ ಸಾರಿದ ತುಳುನಾಡಿನ ವೀರರಾಗಿ ಮೆರೆದು ಮಾನವತ್ವದಿಂದ ದೈವತ್ವಕ್ಕೇರಿದ ಕೋಟಿ-ಚೆನ್ನಯರು ಹಾಗೂ ದೇಯಿ ಬೈದ್ಯೆತಿ ಮೂಲಸ್ಥಾನ ಕ್ಷೇತ್ರವು ವೈದಿಕ ವಿಧಿ ವಿಧಾನಗಳಿಂದ, ನಾಡಿನಾದ್ಯಂತದ ಗಣ್ಯರು, ಭಕ್ತರ ಸಮ್ಮಿಲನಕ್ಕೆ ಸಾಕ್ಷಿಯಾಯಿತು.
ಕ್ಷೇತ್ರದಲ್ಲಿ ಫೆ. 24ರಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, ಅಂದಿನಿಂದ ಪ್ರತಿದಿನ ರಾತ್ರಿ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರೆ, ಶುಕ್ರವಾರ ಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಮುಂಜಾನೆಯಿಂದಲೇ ಸಹಸ್ರ ಸಂಖ್ಯೆಯ ಭಕ್ತರು ಹರಿದುಬಂದರು. ಪೊಲೀಸ್ ಇಲಾಖೆ, ಕ್ಷೇತ್ರದ ಸ್ವಯಂಸೇವಕರು ಶಿಸ್ತುಬದ್ಧವಾಗಿ ಭಕ್ತರಿಗೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಟ್ಟರು.
ಲಕ್ಷಾಂತರ ಮಂದಿಗೆ ಅನ್ನದಾನ
ಕ್ಷೇತ್ರದ “ಬಂಗಾರ್ ತಿನಸ್’ ಭೋಜನ ಶಾಲೆಯಲ್ಲಿ ನಿರಂತರ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದುವರೆಗೆ ಲಕ್ಷಾಂತರ ಮಂದಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಶುಕ್ರವಾರ ಒಂದೇ ದಿನದಲ್ಲಿ 50 ಸಾವಿರಕ್ಕೂ ಮಿಕ್ಕಿ ಜನರು ಅನ್ನಪ್ರಸಾದ ಸ್ವೀಕರಿಸಿದರು.
ಸುಮಾರು 50 ಮಂದಿ ಅಡಿಗೆ ತಯಾರಕ ತಜ್ಞರು, 150 ಮಂದಿ ಅಡುಗೆ ಸಹಾಯಕರು, 50 ಕೌಂಟರ್ಗಳಲ್ಲಿ 500 ಮಂದಿ ಊಟ ಬಡಿಸುವ ಸ್ವಯಂಸೇವಕರು ಭೋಜನ ಶಾಲೆಯ ಅಚ್ಚುಕಟ್ಟಿನ ವ್ಯವಸ್ಥೆಯನ್ನು ನಿಭಾಯಿಸಿದರು. ಶುಕ್ರವಾರ ವಿಶೇಷವಾಗಿ ಲಾಡು, ಪಾಯಸವನ್ನು ಭಕ್ತರು ಸವಿದರು. ವಿವಿಐಪಿ, ಎಲೆ ಊಟದ ಕೌಂಟರ್, ಸೇವಾ ಕೇಂದ್ರಗಳನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು. ಭೋಜ ಶಾಲೆಯ ಬಳಿಯೂ ಕಾರ್ಯಕ್ರಮಗಳ ಲೈವ್ ವೀಕ್ಷಣೆಗೆ ಎಲ್ಸಿಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಲೀಲಾವತಿ ಅಮ್ಮ, ಪದ್ಮನಾಭ ಸುವರ್ಣ, ರವೀಂದ್ರ ಸುವರ್ಣ, ಮಹಾಬಲ ಪೂಜಾರಿ, ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿ ಸುಧಾಕರ ಸುವರ್ಣ ಹಾಗೂ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ನರೇಶ್ ಕುಮಾರ್ ಸಸಿಹಿತ್ಲು, ಪ್ರಧಾನ ಕಾರ್ಯದರ್ಶಿ ಯಶವಂತ ದೇರಾಜೆಗುತ್ತು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್, ಗಣ್ಯರಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಚಿತ್ತರಂಜನ್, ರಕ್ಷಿತ್ ಶಿವರಾಮ್, ಸತ್ಯಜಿತ್ ಸುರತ್ಕಲ್, ದಯಾನಂದ್ ಬೋಂಟ್ರ, ಮುಂಬಯಿ ಟ್ರಸ್ಟ್ ಸದಸ್ಯರು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು, ಪ್ರಮುಖರು, ಸಾವಿರಾರು ಭಕ್ತರು ಪಾಲ್ಗೊಂಡರು.
