ಸಮಾನ ವಯಸ್ಕರು ಹೆಚ್ಚು ಹೆಚ್ಚು ಕಾಂಗ್ರೆಸ್ ಗೆ ಸೇರ್ಪಡೆ ಆಗಬೇಕು : ಸಿದ್ದರಾಮಯ್ಯ -Vishwanews24
ಬೆಂಗಳೂರು: ಮಹಾತ್ಮಗಾಂಧಿ 150ನೇ ಜನ್ಮದಿನ ಪ್ರಯುಕ್ತ ಹಮ್ಮಿಕೊಂಡಿದ್ದ ಸದ್ಭಾವನ ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೆಂದ್ರದ ವಿರುದ್ಧ ವಾಗ್ದಾಳಿ ಹರಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಹಾತ್ಮಾ ಗಾಂಧೀಜಿ ಒಬ್ಬ ವ್ಯಕ್ತಿಯಲ್ಲ ಅವರೊಂದು ಸಿದ್ಧಾಂತ. ಮಹಾತ್ಮ ಗಾಂಧಿ ಹೇಳಿದ ರಾಮನೇ ಬೇರೆ ಹಿಂದೂ ಕೋಮುವಾದಿ ಬಿಜೆಪಿ ಪಕ್ಷ ಹೇಳುತ್ತಿರುವ ರಾಮನೆ ಬೇರೆ. ಗಾಂಧಿಜಿ ಅವರು ದೇಶವನ್ನು ಒಗ್ಗೂಡಿಸಲು ಬಳಸಿದ್ದ ರಾಮನ ಪದವನ್ನು ಇಂದು ಬಿಜೆಪಿಯವರು ದೇಶ ಒಡೆಯಲು ಬಳಸುತ್ತಿರುವುದು ವಿಪರ್ಯಾಸ. ಇವರ ಕುಟಿಲತೆಯನ್ನು ಕಾಂಗ್ರೆಸ್ ನವರು ಅರ್ಥಮಾಡಿಕೊಳ್ಳಬೇಕು. ಸಮಾನವಯಸ್ಕರು ಹೆಚ್ಚು ಹೆಚ್ಚು ಕಾಂಗ್ರೆಸ್ ಗೆ ಸೇರ್ಪಡೆ ಆಗಬೇಕು. ನನ್ನ ಬದುಕೇ ನನ್ನ ಸಂದೇಶ ಎಂದು ಹೇಳಿದ್ದ ಮಹಾತ್ಮಗಾಂಧಿ ಎಲ್ಲರ ಆದರ್ಶವಾಗಬೇಕು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪ್ರತಿಯೊಬ್ಬ ನಾಯಕರಿಗೆ ಮಹಾತ್ಮಗಾಂಧಿ ಗುರುವಾಗಿ ಕಾಣಿಸುತ್ತಾರೆ. ಇಂದಿನ ಯುವಕರು ಗಾಂಧೀಜಿಯವರನ್ನು ಮರೆಯುತ್ತಿರುವುದು ವಿಷಾದದ ಸಂಗತಿ. ಸರಿಯಾದ ಗಾಂಧೀಜಿಯವರ ವಿಚಾರಧಾರೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಕಾರ್ಯ ಆಗಬೇಕು. ಏಕೆಂದರೆ ಗಾಂಧೀಜಿ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದ್ದಾರೆ. ವಿಚ್ಛಿದ್ರಕಾರಕ ಶಕ್ತಿಗಳು ಇಂದು ದೇಶವನ್ನು ಒಡೆಯುವ ಕಾರ್ಯ ಮಾಡುತ್ತಿದ್ದು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಇದನ್ನ ಹಿಮ್ಮೆಟ್ಟಿಸುವ ಸಂಕಲ್ಪವನ್ನು ಮಾಡಬೇಕು ಎಂದರು.
ನರೇಂದ್ರ ಮೋದಿ ಹಾಗೂ ಟ್ರಂಪ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಟ್ರಂಪ್ ಅವರೊಬ್ಬ ಅವಿವೇಕಿ. ಮೋದಿ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದು ಅವಿವೇಕತನ ಪ್ರದರ್ಶಿಸಿದ್ದಾರೆ. ನಿಜವಾದ ದೇಶ ಭಕ್ತ ಮೋದಿ ಆಗಿದ್ದರೆ ಟ್ರಂಪ್ ಎದುರು ಇದನ್ನು ನಿರಾಕರಿಸಬೇಕಿತ್ತು. ದೇಶಕ್ಕೆ ಬರ-ನೆರೆ ಸಮಸ್ಯೆ ಎದುರಾದಾಗ ಗಾಂಧೀಜಿ ಮರುಗಿ ಜನರ ಪರವಾಗಿ ನಿಲ್ಲುವ ಕೆಲಸ ಮಾಡಿದ್ದರು. ಆದರೆ ಮೋದಿ ದೇಶಕ್ಕೆ ಆತಂಕ ಎದುರಾದಾಗ ವಿದೇಶಕ್ಕೆ ಹೋಗುತ್ತಾರೆ. ಒಬ್ಬ ಪ್ರಭಾವಿ ರಾಷ್ಟ್ರದ ಅಧ್ಯಕ್ಷರಾಗಿ ಟ್ರಂಪ್ ಆಡಿರುವ ಮಾತು ಕೂಡ ಸರಿಯಲ್ಲ. ಇಡೀ ರಾಷ್ಟ್ರವೇ ನೆರೆ ಹಾಗೂ ಬರದಿಂದ ಸಮಸ್ಯೆ ಇದೆ. ಆದರೂ ಕರ್ನಾಟಕವಲ್ಲ ಅವರ ತವರಾದ ಗುಜರಾತಿಗೆ ಕೂಡ ಹೋಗಿಲ್ಲ. ಕೇರಳ ಒರಿಸ್ಸಾ ತೆಲಂಗಾಣ ರಾಜ್ಯಗಳಿಗೆ ಭೇಟಿ ಕೊಟ್ಟಿಲ್ಲ. ಬಿಹಾರದ ಸಮಸ್ಯೆಗೆ ಸ್ಪಂದಿಸಿ ಟ್ವೀಟ್ ಮಾಡುತ್ತಾರೆ. ಸಮಸ್ಯೆಗೆ ಸ್ಪಂದಿಸಿ ಪರಿಹಾರ ಧನ ಬಿಡುಗಡೆ ಮಾಡುವ ಕಾರ್ಯ ಮಾಡಿಲ್ಲ. ಇಂತಹ ಪ್ರಧಾನಿ ದೇಶಕ್ಕೆ ಮಾರಕ ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.
