ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿಲ್ಲ, ರಾಜ್ಯದಲ್ಲಿ ಈಗಾಗಲೇ ಇದು ಜಾರಿಯಲ್ಲಿದೆ : ಡಿ ಕೆ ಶಿ -Vishwanews24
ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿಲ್ಲ, ರಾಜ್ಯದಲ್ಲಿ ಈಗಾಗಲೇ ಇದು ಜಾರಿಯಲ್ಲಿದೆ : ಡಿ ಕೆ ಶಿ -Vishwanews24
ಬೆಂಗಳೂರು: ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿಲ್ಲ. ಈಗಾಗಲೇ ಇದು ರಾಜ್ಯದಲ್ಲಿ ಜಾರಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಅದು ಅಗತ್ಯವಿಲ್ಲ ನಾವು ಇದನ್ನು ವಿರೋಧಿಸುತ್ತೇವೆ ಎಂದರು.
ಎಪಿಎಂಸಿ, ಕಾರ್ಮಿಕ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆ ರದ್ದುಪಡಿಸುವಂತೆ ಸಹಿ ಸಂಗ್ರಹ ಮಾಡಲಾಗಿದೆ. ಸುಮಾರು 2.85 ಲಕ್ಷ ರೈತರು ಪೋಸ್ಟ್ ಕಾರ್ಡ್ ಮೂಲಕ ಬೆಂಬಲ ಸೂಚಿಸಿದ್ದಾರೆ. ಅದನ್ನು ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರಪತಿಗೆ ತಲುಪಿಸಲಿದ್ದಾರೆ ಎಂದರು.
ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ನಡೆಸುತ್ತಿರುವ ಬಂದ್ ಗೆ ರಾಜ್ಯಾದ್ಯಂತ ಬೆಂಬಲ ಸೂಚಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಬ್ಲಾಕ್ ಮಟ್ಟದಿಂದಲೇ ಪ್ರತಿಭಟನೆ ಮಾಡುವಂತೆ ಪಕ್ಷ ಸೂಚನೆ ನೀಡಿದೆ.ಆದರೆ ನಾವು ಯಾರಿಗೂ ಬಲವಂತ ಮಾಡುವುದಿಲ್ಲ. ಶಾಂತಿಯುತವಾಗಿ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದರು.
ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಯಾವುದೇ ಆಸ್ತಿ ಪಾಸ್ತಿ ಹಾನಿ ಮಾಡುವುದಿಲ್ಲ. ನಾಳೆ ವಿಧಾನಸೌದದ ಎದುರುಗಡೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
