ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅನಾವಶ್ಯಕ ಭರವಸೆಗಳನ್ನು ನೀಡಬಾರದು : ಸಹೋದ್ಯೋಗಿಗಳಲ್ಲಿ ಮೋದಿ ಮನವಿ
ನವದೆಹಲಿ: ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು, ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಭರವಸೆಗಳನ್ನು ನೀಡಬಾರದು ಎಂದು ಸಂಪುಟ ಸಹೋದ್ಯೋಗಿಗಳಲ್ಲಿ ಮೋದಿ ಮನವಿ ಮಾಡಿದ್ದಾರೆ.
ಸಚಿವರು ಇತ್ತೀಚಿನ ದಿನಗಳಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಮ್ಮ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪ್ರಧಾನಿ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಹತ್ವದ ಘೋಷಣೆಗಳನ್ನು ಮಾಡುವುದು ಬೇಡ ಎಂದು ಮೋದಿ ಸಚಿವರುಗಳಲ್ಲಿ ವಿನಂತಿಸಿದ್ದಾರೆ.
ಆರ್ಟಿಕಲ್ 370 ರದ್ದುಗೊಂಡಿರುವುದು ಪ್ರತಿಯೊಂದು ಸಚಿವಾಲಯಕ್ಕೂ ಸಂಬಂಧಪಟ್ಟ ವಿಷಯ. ಅಧಿಕಾರಿಗಳ ಮೂಲಕ ಸಚಿವರುಗಳು ಕಣಿವೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಬೇಕು. ಆರ್ಟಿಕಲ್ 370 ರದ್ದತಿ ಹೇಗೆ ಬದಲಾವಣೆ ತರಲಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕು ಎಂದು ಪ್ರಧಾನಿ ಮೋದಿ ಸಚಿವರುಗಳಿಗೆ ಸಲಹೆ ನೀಡಿದ್ದಾರೆ.
ಸಕಾಲಕ್ಕೆ ಕಚೇರಿಗೆ ಹಾಜರಾಗದಿರುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಎಲ್ಲ ಸಚಿವರು ಬೆಳಗ್ಗೆ 9.30ಕ್ಕೆ ಸರಿಯಾಗಿ ತಮ್ಮ ಕಚೇರಿಗಳಲ್ಲಿ ಹಾಜರಿರಬೇಕು ಎಂದು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
