ಸಿಎಂ ಯೋಗಿ ಮೋದಿಯಷ್ಟು ಸಮರ್ಥ ಅಭ್ಯರ್ಥಿ ಅಲ್ಲ ; ಮೋದಿಯೇ ಪ್ರಧಾನಿ ಅಭ್ಯರ್ಥಿ ಆಗಲಿ :ಪೇಜಾವರ ಶ್ರೀ

Featured, ಜಿಲ್ಲೆ

ಉಡುಪಿ: ಪಂಚರಾಜ್ಯ ಫಲಿತಾಂಶವು ಪ್ರಧಾನಿ ಮೋದಿ ಅವರಿಗೆ ಎಚ್ಚರಿಕೆಯಾಗಿದೆ ಎಂದಿರುವ ಶ್ರೀಗಳು, ಆರ್ಥಿಕ ಸುಧಾರಣೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಆದ್ಯತೆ ಕೊಡಲಿ. ಮಂದಿರ ನಿರ್ಮಾಣ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು. ಎನ್‍ಡಿಎ ಮೈತ್ರಿಕೂಟದ ಮೂಲಕ ಸಮಾನ ವಿಚಾರಧಾರೆಯುಳ್ಳ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಸಾಧಿಸಬೇಕು ಎಂದು ತಿಳಿಸಿದರು.

ಇತರೆ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು. ಸಮಾನ ವಿಚಾರಧಾರೆಯುಳ್ಳ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಬೇಕು. ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ. ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ವಾಜಪೇಯಿಯ ನೀತಿಯನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದರು.

ಪ್ರಧಾನಿ ಮೋದಿ ಕೆಲವು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆ ಈಗ ಜನರಲ್ಲಿ ಇಲ್ಲ. ಜನರು ನಿರೀಕ್ಷೆ ಇಟ್ಟಷ್ಟು ಕೆಲಸ ದೇಶದಲ್ಲಿ ಆಗಿಲ್ಲ ಎಂದು ಹೇಳಿದ ಅವರು, ನೋಟು ನಿಷೇಧದ ಫಲ ಜನಸಾಮಾನ್ಯರಿಗೆ ಮುಟ್ಟಿಲ್ಲ ಎಂದು ಅಭಿಪ್ರಾಯ ಪಟ್ಟರು.

ಇನ್ನು ಯೋಗಿ ಆದಿತ್ಯನಾಥ್ ಮುಂದಿನ ಪ್ರಧಾನಿ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಅಭ್ಯರ್ಥಿ ಆಗಬಾರದು ,.ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿಯಾಗಬೇಕು. ಸಿಎಂ ಯೋಗಿ ಮೋದಿಯಷ್ಟು ಸಮರ್ಥರಲ್ಲ. ಆದಿತ್ಯನಾಥ್ ಅವರು ರಾಜಕಾರಣಿಯಲ್ಲ ಅವರು ಸಂತರು. ಸಂತ ಪರಂಪರೆಯ ವ್ಯಕ್ತಿ. ಉತ್ತರ ಪ್ರದೇಶದಲ್ಲಿ ಇಷ್ಟು ಕೆಲಸಗಳನ್ನು ಮಾಡಿರುವುದೇ ವಿಶೇಷ. ಆದರೆ ಅವರು ಈಗ ಪ್ರಧಾನಿ ಅಭ್ಯರ್ಥಿ ಆಗಬಾರದು ಎಂದು ಹೇಳಿದರು.