ಸಿದ್ದಗಂಗಾ ಶ್ರೀಗಳ ಆರೋಗ್ಯ ತೀವ್ರ ಗಂಭೀರ – Vishwanews24
ತುಮಕೂರು,: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಹಳೆ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ. ತುಮಕೂರಿನಲ್ಲಿ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಾ.ಪರಮೇಶ್ ಅವರು ಡಾ| ಶಿವಕುಮಾರ್ ಸ್ವಾಮೀಜಿಗಳ ಬಿ.ಪಿ ಏರುಪೇರಾಗುತ್ತಿದೆ. ಪ್ರೋಟೀನ್ ಅಂಶ ತುಂಬಾ ಕಡಿಮೆಯಾಗಿದೆ.ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಶ್ರೀಗಳಿಗಳಿಗೆ ನಿಶ್ಯಕ್ತಿ ಹೆಚ್ಚಾಗಿದ್ದು, ನಿನ್ನೆ ಆರ್ಯುವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಶ್ರೀಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.
ಇಂದು ಬೆಳಿಗ್ಗೆಯೇ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಏರುಪೇರು ಕಂಡಿತ್ತು. ಹೀಗಾಗಿ, ಸಿದ್ದಗಂಗಾ ಆಸ್ಪತ್ರೆ ವೈದ್ಯ ಡಾ. ಪರಮೇಶ್ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ದಗಂಗಾ ಮಠದ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈಗಾಗಲೇ ಐಜಿಪಿ ನೀಲಮಣಿರಾಜು ಆದೇಶದಂತೆ ಭದ್ರತೆ ಹೆಚ್ಚಿಸಲಾಗಿದ್ದು, ಮೊದಲ ಹಂತದಲ್ಲಿ 2 ಸಾವಿರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
1500 ಗೃಹ ರಕ್ಷಕದಳ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲು ಸೂಚಿಸಲಾಗಿದೆ.
