ಸ್ವಾತಂತ್ರ್ಯಾನಂತರದಲ್ಲಿ ಇದೇ ಮೊದಲ ಬಾರಿಗೆ ದೇಶದ ಮೂಲೆಮೂಲೆಯಲ್ಲೂ ಆಡಳಿತ ಪರ ಅಲೆ ಕಾಣುತ್ತಿದೆ : ವಾರಾಣಸಿಯಲ್ಲಿ ಪ್ರಧಾನಿ ಮೋದಿ -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ವಾರಾಣಸಿ: ಸ್ವಾತಂತ್ರ್ಯಾನಂತರದಲ್ಲಿ ಇದೇ ಮೊದಲ ಬಾರಿಗೆ ದೇಶದ ಮೂಲೆಮೂಲೆಯಲ್ಲೂ ಆಡಳಿತ ಪರ ಅಲೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರ.

ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮರುಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸುವ ಮುನ್ನ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ಗೆಲ್ಲಲಿ ಬಿಡಲಿ… ಒಟ್ಟಿನಲ್ಲಿ ಪ್ರಜಾಪ್ರಭುತ್ವಕ್ಕೆ ಗೆಲುವಾಗಬೇಕು. ಮೇ ತಿಂಗಳ ಬಿರುಬಿಸಿಲನ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಮತದಾನದ ಹಿಂದಿನ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಡಬೇಕು. ಎಷ್ಟು ಪುರುಷರು ಮತದಾನ ಮಾಡುತ್ತಾರೋ ಅದಕ್ಕಿಂತ ಶೇ.5 ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಸೂಚಿಸಿದರು.

100 ಜನ ಪುರುಷರು ಮತದಾನ ಮಾಡಿದರೆ, 105 ಮಹಿಳೆಯರು ಮತದಾನ ಮಾಡುವ ರೀತಿ ಎಚ್ಚರವಹಿಸಬೇಕು. ಕೇವಲ ವಾರಾಣಸಿಯನ್ನು ಗೆದ್ದರೆ ಸಾಲದು, ಪ್ರತಿಯೊಂದು ಬೂತ್​ ಅನ್ನೂ ನಾವು ಗೆಲ್ಲಬೇಕು. ಹೀಗೆ ಆಗದಿದ್ದರೆ ವಾರಾಣಸಿಯಲ್ಲಿನ ಗೆಲುವನ್ನು ಆಸ್ವಾದಿಸಲು ನನಗೆ ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಈ ಬಾರಿಯ ವಾರಾಣಸಿ ಚುನಾವಣೆ ಹೇಗಿರಬೇಕು ಎಂದರೆ, ನಮ್ಮ ದೇಶದ ರಾಜಕೀಯ ಪಂಡಿತರು ವಾರಾಣಸಿಯ ಐತಿಹಾಸಿಕ ಚುನಾವಣೆಯ ಕುರಿತು ಪುಸ್ತಕ ಬರೆಯುವಂತೆ ಇರಬೇಕು ಎಂದು ಹೇಳಿದರು.

ಗುರುವಾರ ನಡೆದ ತಮ್ಮ ರೋಡ್​ ಶೋಗೆ ವ್ಯಕ್ತವಾದ ಜನಬೆಂಬಲವನ್ನು ಗಮನಿಸಿದಾಗ ತಾವು ಈಗಾಗಲೆ ವಾರಾಣಸಿ ಕ್ಷೇತ್ರದಿಂದ ಗೆದ್ದಂತೆ ಭಾಸವಾಗುತ್ತಿದೆ. ವಾರಾಣಸಿಯ ಜನರು ರೋಡ್​ ಶೋಗೆ ವ್ಯಕ್ತಪಡಿಸಿದ ಬೆಂಬಲ ನೋಡಿದ ಬಳಿಕ ಮಾಧ್ಯಮಗಳು ಕೂಡ ಇನ್ನೇನು ಬಿಜೆಪಿ ಗೆದ್ದಾಗಿದೆ ಎಂದೇ ಹೇಳುತ್ತಿದ್ದು, ವಾರಾಣಸಿಯ ಚುನಾವಣೆ ಕುರಿತು ಹೆಚ್ಚಿನ ಕುತೂಹಲವನ್ನು ಕಳೆದುಕೊಂಡಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ನಾನು ಪ್ರಧಾನಿ ಎಂಬ ಅಹಂನಲ್ಲಿ ಯಾರನ್ನೂ ಭೇಟಿಯಾಗಲು ನಿರಾಕರಿಸಲಿಲ್ಲ. ಪಕ್ಷದ ಒಬ್ಬನೇ ಒಬ್ಬ ಕಾರ್ಯಕರ್ತನನ್ನೂ ಭೇಟಿಯಾಗಲು ಒಲ್ಲೆಯೆನ್ನಲಿಲ್ಲ. ನನ್ನೊಳಗಿನ ಕಾರ್ಯಕರ್ತನನ್ನು ಜೀವಂತವಾಗುಳಿಸಿಕೊಂಡೆ. ಪ್ರಧಾನಿಯಾಗಿ, ಸಂಸದನಾಗಿ ಮತ್ತು ಕಾರ್ಯಕರ್ತನಾಗಿ ನನ್ನ ಕರ್ತವ್ಯಗಳನ್ನು ನಾನೆಂದೂ ಮರೆಯಲಿಲ್ಲ… ಎಂದು ಪ್ರಧಾನಿ ಹೇಳಿದರು.