ಹರ್ಯಾಣ ವಿಧಾನಸಭಾ ಚುನಾವಣೆ : ಭಾರತದ ಒಲಿಂಪಿಕ್ ಕುಸ್ತಿ ಪಟುಗಳಾದ ಯೋಗೇಶ್ವರ್ ದತ್, ಬಬಿತಾ ಫೋಗಟ್ ರನ್ನು ಕಣಕ್ಕಿಳಿಸಿದ ಬಿಜೆಪಿ -Vishwanews24
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ 78 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಸಿಎಂ ಮನೋಹರ್ ಖಟ್ಟರ್, ರಾಜ್ಯ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ, ಕ್ರೀಡಾ ಕ್ಷೇತ್ರದ ಹಲವು ಸಾಧಕರಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡಿಲಾಗಿದ್ದು, ಕುಸ್ತಿ ಪಟುಗಳಾದ ಯೋಗೇಶ್ವರ್ ದತ್, ಬಬಿತಾ ಪೋಗಟ್ ಹಾಗೂ ಭಾರತದ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ಗೆ ಬಿಜೆಪಿ ಟಿಕೆಟ್ ನೀಡಿದೆ.
78 ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯಲ್ಲಿ ಸೋಮವಾರ ಪ್ರಕಟಿಸಲಾಯಿತು. ಒಲಿಂಪಿಕ್ ಕುಸ್ತಿ ಪಟುಗಳಾದ ಯೋಗೇಶ್ವರ ದತ್ ಹಾಗೂ ಬಬಿತಾ ಪೋಗಟ್, ಇತ್ತೀಚೆಗೆ ಬಿಜೆಪಿ ಸೇರಿದ್ದ ಭಾರತೀಯ ಹಾಕಿ ತಂಡದ ನಾಯಕ ಸಂದೀಪ್ ಸಿಂಗ್ ಅವರು ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ.
ಮೊದಲ ಪಟ್ಟಿಯಲ್ಲಿ 38 ಹಾಲಿ ಶಾಸಕರಿಗೆ ಚುನಾವಣೆಗೆ ಟಿಕೆಟ್ ನೀಡಲಾಗಿದ್ದು, 8 ಮಹಿಳೆಯರಿಗೂ ಟಿಕೆಟ್ ಕಲ್ಪಿಸಲಾಗಿದೆ. ಇಬ್ಬರು ಸಚಿವರು, 7 ಶಾಸಕರನ್ನು ಕೈಬಿಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಪಕ್ಷದ ಪ್ರಮುಖರು ಭಾನುವಾರ ತಡರಾತ್ರಿಯವರೆಗೂ ಸಭೆ ನಡೆಸಿದ್ದರು. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 47ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 15, ಐಎನ್ಎಲ್ಡಿ 19 ಹಾಗೂ ಸ್ಥಳೀಯ ಪಕ್ಷಗಳು ಮತ್ತು ಪಕ್ಷೇತರರು 9 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು.
