ಹೆಲ್ಮೆಟ್ ಧರಿಸದ ಯುವಕರಿಗೆ ಗುಲಾಬಿ ನೀಡಿ ಬುದ್ಧಿವಾದ ಹೇಳಿದ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಠಾಣಾ ಮಹಿಳಾ ಪೊಲೀಸ್ ಅಧಿಕಾರಿ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು, : ಅಕ್ರಮಕ್ಕೆ ಅಂಕುಶ ಹಾಕಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಠಾಣಾ  ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ರಸ್ತೆ ಸುರಕ್ಷತೆ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸಲು  ಹೆಲ್ಮೆಟ್ ಧರಿಸದೇ ಸುತ್ತಾಡುವ ಯವಕರಿಗೆ ತಕ್ಕ ಪಾಠ ಕಲಿಸಿದ್ದಾರೆ.

ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ಸುತ್ತಾಡುತ್ತಿದ್ದ ಯುವಕರನ್ನ ಅಡ್ಡ ಹಾಕಿದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ಯುವಕನಿಗೆ ಗುಲಾಬಿ ಕೊಟ್ಟು, ಇನ್ನಾದರೂ ಹೆಲ್ಮೆಟ್ ಧರಿಸಿ ಸಂಚರಿಸು ಎಂದು ಬುದ್ಧಿವಾದ ಹೇಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಡಂತ್ಯಾರಿನಲ್ಲಿ ನಡೆದಿದೆ.

ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ  ನಿನ್ನೆ ಗುರುವಾರ  ಮಡಂತ್ಯಾರು ಪೇಟೆಯಲ್ಲಿ  ಯುವಕರಿಬ್ಬರು ಬೈಕ್ ನಲ್ಲಿ ಬರುತ್ತಿರುವುದನ್ನು ಗಮನಿಸಿದ ಸೌಮ್ಯರಾಣಿ ಬೈಕನ್ನು ನಿಲ್ಲಿಸಿದ್ದಾರೆ.  ಈ ಸಂದರ್ಭದಲ್ಲಿ ಎಸ್ಸೈ ಸೌಮ್ಯ ಅವರು ಬೈಕ್ ನಲ್ಲಿದ್ದ ಯುವಕನಿಗೆ ಗುಲಾಬಿ ಕೊಟ್ಟು ಬುದ್ಧಿ ಮಾತು ಹೇಳಿದ್ದಾರೆ. ಇನ್ನಾದರೂ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಕೂಡ ಈ ಘಟನೆಗೆ ಸಾಕ್ಷಿಯಾಗಿದ್ದಾರೆ.

ರಸ್ತೆ ಅಪಘಾತ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಾಲಕ ಹಾಗೂ ಪ್ರಯಾಣಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳ ತಂಡ ಶಾಲಾ ಮಕ್ಕಳ, ಕಾಲೇಜು ವಿದ್ಯಾರ್ಥಿಗಳ ಜೊತೆಗೂಡಿ ಹೆಲ್ಮೆಟ್ ಇಲ್ಲದ ಪ್ರಯಾಣಿಕರಿಗೆ, ಸೀಟ್ ಬೆಲ್ಟ್ ಹಾಕದೆ ಚಲಾವಣೆ ಮಾಡುವ ಚಾಲಕರಿಗೆ ಗುಲಾಬಿ ಹೂ ಕೊಟ್ಟು ಬುದ್ದಿ ಮಾತಿನಲ್ಲಿ ಎಚ್ಚರಿಕೆ ನೀಡಿದರು.

ಯುವಕರಿಗೆ ಗುಲಾಬಿ ಹೂ ನೀಡಿ, ಎಸ್ಸೈ ಬುದ್ದಿವಾದ ಹೇಳುತ್ತಿರುವ ಫೋಟೋ ಒಂದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.