ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ನಾಲ್ಕು ಬೋಗಿಗಳು ; ತಪ್ಪಿದ ಭಾರೀ ಅನಾಹುತ – vishwanews24
ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ನಾಲ್ಕು ಬೋಗಿಗಳು ; ತಪ್ಪಿದ ಭಾರೀ ಅನಾಹುತ
ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳಿಗೆ ಬೆಂಕಿ ತಗುಲಿದ ಘಟನೆ ಶುಕ್ರವಾರ ಮಧ್ಯಾಹ್ನ ಪಂಜಾಬ್‌ನ ಪಟಿಯಾಲ ಜಿಲ್ಲೆಯ ರಾಜ್‌ಪುರ ಸಮೀಪ ನಡೆದಿದೆ. ಮಧ್ಯಾಹ್ನ ಸುಮಾರು 1 ಗಂಟೆಗೆ ಸಂಭವಿಸಿದ ಈ ಘಟನೆಯಿಂದ ರೈಲಿನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕರ್ಮಭೂಮಿ ಎಕ್ಸ್‌ಪ್ರೆಸ್ (12508) ರೈಲಿನ ಒಂದು ಬೋಗಿಯ ಫ್ಯಾನ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ರೈಲ್ವೆ ಪೊಲೀಸ್ ಠಾಣಾಧಿಕಾರಿ ಗುರ್‌ಪ್ರೀತ್ ಸಿಂಗ್ ತಿಳಿಸಿದ್ದಾರೆ. ಆರಂಭದಲ್ಲಿ ಒಂದು ಬೋಗಿಯಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಇತರ ಎರಡು ಬೋಗಿಗಳಿಗೂ ವ್ಯಾಪಿಸಿದೆ ಎಂದು ಹೇಳಿದ್ದಾರೆ.
ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ಆರಂಭಿಸಿದರು. ಸಕಾಲಿಕ ಕ್ರಮ ಕೈಗೊಂಡ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಘಟನೆ ಬಳಿಕ ಪ್ರಯಾಣಿಕರಿಗೆ ಪ್ರಯಾಣವನ್ನು ಮುಂದುವರಿಸಲು ರೈಲ್ವೆ ಅಧಿಕಾರಿಗಳು ಮತ್ತೊಂದು ರೈಲಿನ ವ್ಯವಸ್ಥೆ ಮಾಡಿದ್ದಾರೆ.
