ಅಜರ್ ಮಸೂದ್ಗೆ ಜಾಗತಿಕ ಉಗ್ರ ಪಟ್ಟ ;ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಜಯ .. -Vishwanews24
ವಿಶ್ವಸಂಸ್ಥೆ: ಪುಲ್ವಾಮಾ ಉಗ್ರ ದಾಳಿಯ ರೂವಾರಿ ಜೈಷೆ ಮೊಹಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಕೊನೆಗೂ ಸೇರಿಸಲಾಗಿದೆ.
ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕನೂ ಆದ ಅಜರ್ಗೆ ಪಾಕಿಸ್ತಾನದ ಪಕ್ಷಪಾತಿಯಾದ ಚೀನಾ ವಿಟೋ ಅಧಿಕಾರ ಬಳಸಿಕೊಂಡು ದಶಕಗಳಿಂದ ರಕ್ಷಣೆ ನೀಡುತ್ತಿತ್ತು. ಆದರೆ ವಿಶ್ವಸಮುದಾಯ ಭಾರತವನ್ನು ಬೆಂಬಲಿಸಿ ಚೀನಾವನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿದ ಡ್ರಾ್ಯಗನ್ ರಾಷ್ಟ್ರ ಅಜರ್ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿರ್ಣಯಕ್ಕೆ ಎತ್ತಿದ್ದ ‘ತಾಂತ್ರಿಕ ಕಾರಣ’ದ ಆಕ್ಷೇಪವನ್ನು ಬುಧವಾರ ಹಿಂಪಡೆಯಿತು. ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267ನೇ ನಿರ್ಬಂಧ ಸಮಿತಿ ನಿರ್ಣಯ ಅಂಗೀಕರಿಸಿದೆ.ಇದು ಭಾರತದ ರಾಜತಾಂತ್ರಿಕ ಗೆಲುವು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಜೈಪುರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಮೋದಿ, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಇದು ಸಂದ ಜಯವಾಗಿದೆ. ಇದು 130 ಕೋಟಿ ಭಾರತೀಯರ ದನಿ ವಿಶ್ವದೆಲ್ಲೆಡೆ ಕೇಳುವಂತಾಗಿದೆ ಎಂದರು.
ನಿರಂತರ ವಿಧ್ವಂಸ್ಕಕ ಕೃತ್ಯಗಳನ್ನು ಎಸಗುತ್ತಿದ್ದ ಅಜರ್ ಮಸೂದ್ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಭಾರತ ಒತ್ತಡ ಹೇರಿತ್ತು. ಪುಲ್ವಾಮಾ ಉಗ್ರ ದಾಳಿಯ ನಂತರವಂತೂ ಭಾರತ ಒತ್ತಡವನ್ನು ಹೆಚ್ಚಿಸಿತ್ತು. ಇದಕ್ಕೆ ಅಮೆರಿಕ, ರಷ್ಯಾ, ಫ್ರಾನ್ಸ್ ಕೂಡ ಬೆಂಬಲ ನೀಡಿತ್ತು. ಈಗ ಭಾರತದ ಪ್ರಯತ್ನಕ್ಕೆ ಜಯ ದಕ್ಕಿದೆ.
“ಪ್ರತಿ ಭಾರತೀಯನೂ ಹೆಮ್ಮೆ ಪಡುವಂಥ ದಿನ ಇದು. ಜಾಗತಿಕ ಸಮುದಾಯ ಮತ್ತು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ನಮ್ಮನ್ನು ಬೆಮಬಲಿಸಿದ ಎಲ್ಲರಿಗೂ ನಾನು ಕೃತಜ್ಞತೆ ಅರ್ಪಿಸುತ್ತೇನೆ. ಭಯೋತ್ಪಾದನೆಯ ಬಗೆಗಿನ ಭಾರತದ ಹೋರಾಟ ಮುಂದುವರಿಯಲಿದೆ. ನಮ್ಮ ಭೂಮಿಯಲ್ಲಿ ಶಾಂತಿ ಮತ್ತು ಭ್ರಾತೃತ್ವ ನೆಲೆಸುವವರೆಗೆ ನಾವು ಹೋರಾಡುತ್ತೇವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
