ಅತ್ತೂರು ಪರ್ಪಲೆಗಿರಿ ಮೂರು ದಿನದ ಅಷ್ಟಮಂಗಲ ಸಮಾಪ್ತಿ.ಮೈ ರೋಮಂಚನಗೊಳಿಸುವ ದೈವಿಖ ವಿಚಾರಗಳು ಅಷ್ಟಮಂಗಲ ಪ್ರಶ್ನೆಯಲ್ಲಿ ಬಹಿರಂಗ- vishwsnews24

Featured, ಉಡುಪಿ

ಕಾರ್ಕಳ : ಅತ್ತೂರು ಪರ್ಪಲೆಗಿರಿಯಲ್ಲಿ ಶಿವ ದೇವರು, ಕಲ್ಕುಡ, ಕಲ್ಲುರ್ಟಿ, ತೂಕತ್ತೆರಿ, ರಕ್ತೇಶ್ವರಿ ಸಾನ್ನಿಧ್ಯವಿದ್ದು, ಈ ಶಕ್ತಿಗಳಿಗೆ ಆರಾಧನಾಲಯಗಳು ನಿರ್ಮಾಣವಾಗಬೇಕು. ಧ್ವಜಸ್ತಂಭದ ಮೂಲಕ ದೇಗುಲ ನಿರ್ಮಾಣ ಪ್ರಾರಂಭಗೊಂಡು ಆರಾಧನೆ ನಡೆಯಬೇಕೆಂದು ಮೂರನೇ ದಿನ ಅತ್ತೂರು ಪರ್ಪಲೆಗಿರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂತು.
ಹಿಂದೂ ಜಾಗರಣ ವೇದಿಕೆ ಕಾರ್ಕಳ, ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ವತಿಯಿಂದ ದೈವಜ್ಞರಾದ ನಾರಾಯಣ ಪೊದುವಾಳ್, ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ ಭಟ್ ನೇತೃತ್ವದಲ್ಲಿ ನಡೆದ ಮೂರನೇ ದಿನದ ಅಷ್ಟಮಂಗಲದಲ್ಲಿ ಪರ್ಪಲೆಗಿರಿಯಲ್ಲಿ ಸಾನಿಧ್ಯ ದೇವರು ಆರಾಧನೆಗೊಂಡಲ್ಲಿ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುವುದು. ಅನ್ಯ ಕ್ಷೇತ್ರಕ್ಕೆ ಹೋಗುವ ಸಂಪತ್ತು ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಹರಿದುಬರಲಿದೆ ಎಂದು ತಿಳಿದುಬಂತು.

ಧನ್ವಂತರಿ ಕೆರೆ
ಪಶ್ಚಿಮ ದಿಕ್ಕಿನಲ್ಲಿ ಕೆರೆಯಿರುವುದು ಸಾನಿಧ್ಯಕ್ಕೆ ಕುರುಹು. ಹೀಗಾಗಿ ಪರ್ಪಲೆಗಿರಿಯಲ್ಲಿ ಸ್ವಯಂಭೂ ಶಕ್ತಿಯಿರುವ ಶಿವನ ಚೈತನ್ಯವಿದೆ. ಪುರಾತನ ಕಾಲದಲ್ಲಿ ಇದೇ ಕೆರೆಯ ನೀರನ್ನು ಕಲಶಕ್ಕೆ ಬಳಸಲಾಗುತ್ತಿತ್ತು. ಕೆರೆ ನೀರು ಧನ್ವಂತರಿ ಗುಣವನ್ನು ಹೊಂದಿದ್ದು, ಪ್ರಸ್ತುತ ಈ ಕೆರೆ ನೀರನ್ನು ಬಳಸದೇ ಇರುವುದರಿಂದ ಮಲಿನವಾಗಿದೆ ಎಂದು ದೈವಜ್ಞರು ತಿಳಿಸಿದರು.

ಜ. 4, 5 ರಂದು ದೈವಸ್ಥಾನ ನಿರ್ಮಾಣ ಕುರಿತು ಚಿಂತನೆ
ಜ. 4 ಮತ್ತು 5ರಂದು ದೈವಸ್ಥಾನ ನಿರ್ಮಾಣ ಕುರಿತು ಚಿಂತನೆ ನಡೆಯಲಿದೆ. ಪ್ರಶ್ನಾ ಚಿಂತನೆ ವೇಳೆ ಬೆಳಗಿದ ದೀಪ ನಂದದೇ ಇರುವುದು ಹಾಗೂ ಎಣ್ಣೆ ಹಾಕುವ ಪ್ರಮೇಯ ಬಾರದೇ ಇರುವುದು ಶುಭಸೂಚನೆಯಾಗಿದ್ದು, ಮುಂದಿನ ಪ್ರಶ್ನಾ ಚಿಂತನೆ ತನಕ ನಿತ್ಯ ಸಂಜೆ ಈ ಕ್ಷೇತ್ರದಲ್ಲಿ ದೀಪ ಬೆಳಗಬೇಕು ಮತ್ತು ಪ್ರತಿ ಶನಿವಾರ ಸಂಜೆ ಭಜನೆ ನಡೆಯಬೇಕು. ಜ. 4ರ ಮೊದಲು ಮೃತ್ಯುಂಜಯ ಹೋಮ, ಗಣಹೋಮವೂ ನಡೆಯಬೇಕೆಂದು ದೈವಜ್ಞರು ತಿಳಿಸಿದರು.

ಕಂಗೊಳಿಸಲಿದೆ ಕೃಷ್ಣಗಿರಿ
ಮುಂದಿನ ದಿನಗಳಲ್ಲಿ ಪರ್ಪಲೆಯ ಕೃಷ್ಣಗಿರಿ ಪುಣ್ಯ ಧಾರ್ಮಿಕ ಕೇಂದ್ರವಾಗಿ ಬೆಳಗಲಿದೆ. ರಾಜ್ಯ, ದೇಶದೆಲ್ಲೆಡೆಯಿಂದ ಸಾವಿರಾರೂ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಲಿದ್ದು, ಹತ್ತೂರಲ್ಲಿ ಪ್ರಸಿದ್ಧಿ ಪಡೆಯಲಿದೆ ಎಂದು ದೈವಜ್ಞರು ಭವಿಷ್ಯ ನುಡಿದರು.

ಹಾಸನ ಜಿಲ್ಲೆಯ ಅರೆಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಸ್ವಾಮೀಜಿ, ಶಾಸಕರಾದ ವಿ. ಸುನಿಲ್‌ ಕುಮಾರ್‌, ಸುಕುಮಾರ್‌ ಶೆಟ್ಟಿ, ರಘುಪತಿ ಭಟ್‌, ಕ್ಯಾ. ಗಣೇಶ್‌ ಕಾರ್ಣಿಕ್‌, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಉದ್ಯಮಿಗಳಾದ ಬೋಳ ಶ್ರೀನಿವಾಸ್‌ ಕಾಮತ್‌ ಮತ್ತು ಪ್ರಸಾದ್‌ ಕಾಮತ್‌, ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಮಹೇಶ್‌ ಶೆಟ್ಟಿ ಕುಡುಪುಲಾಜೆ, ರವೀಂದ್ರ ಶೆಟ್ಟಿ ಬಜಗೋಳಿ, ಉದಯ ಕುಮಾರ್‌ ಶೆಟ್ಟಿ ಕಿದಿಯೂರು ಸೇರಿದಂತೆ ವಿವಿಧ ಕ್ಷೇತ್ರದ ಜನಪ್ರತಿನಿಧಿಗಳು, ಧಾರ್ಮಿಕ ಕೇಂದ್ರಗಳ ಪ್ರಮುಖರು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.