ಅನರ್ಹ ಶಾಸಕರಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ : ಈಶ್ವರಪ್ಪ -Vishwanews24
ಕುಂದಾಪುರ: ಅನರ್ಹ ಶಾಸಕರಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅವರಿಗೆ ಪಕ್ಷದಲ್ಲಿ ಸ್ಥಾನ ನೀಡಲೇಬೇಕಿದೆ. ಇಂತಹ ರಾಜಕೀಯ ಪರಿಸ್ಥಿತಿ ಇರುವಾಗ ಹೊಂದಿಕೊಂಡು ಹೋಗಬೇಕು. ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶಿವಮೊಗ್ಗ ನಗರದ ಬಿ.ಜೆ.ಪಿ ಕಾರ್ಯಕರ್ತರು ಮತ್ತು ಈಶ್ವರಪ್ಪ ಅಭಿಮಾನಿಗಳ ಹರಕೆಯಂತೆ ನಡೆದ ಚಂಡಿಕಾಯಾಗದಲ್ಲಿ ಪತ್ನಿ ಜಯಲಕ್ಷ್ಮೀ ಮತ್ತು ಪುತ್ರಿ ಕನಕ ಅವರೊಂದಿಗೆ ಪಾಲ್ಗೊಂಡರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಅನ್ನಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ಶ್ರೀಪತಿ ಅಡಿಗ ಮತ್ತು ಜಯರಾಮ ಪುರಾಣಿಕರ ನೇತೃತ್ವದಲ್ಲಿ ಚಂಡಿಕಾಯಾಗ ಜರಗಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿ, ಅನರ್ಹ ಶಾಸಕರಿಂದಲೇ ಬಿ.ಜೆ.ಪಿ ಸರ್ಕಾರ ಬರಲು ಕಾರಣವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಹೆಚ್ಚಿನ ಆದ್ಯೆಯೆತೆ ನೀಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಮತ್ತು ಸುಪ್ರೀಂಕೋರ್ಟ್ ಆದೇಶ ನೋಡಿ ಅನರ್ಹ ಅಭ್ಯರ್ಥಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಉಪಚುನಾವಣೆಯಲ್ಲಿ 15ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು. ಶಿವಮೊಗ್ಗ ನಗರದ ಬಿ.ಜೆ.ಪಿ ಕಾರ್ಯಕರ್ತರು ನಮ್ಮ ಮೇಲಿನ ಅಭಿಮಾನದಿಂದ ಪಕ್ಷದ ಮತ್ತು ದೇಶದ ಒಳಿತಿಗಾಗಿ ಚಂಡಿಕಾಯಾಗ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸಿ ಸಂತೋಷವಾಯಿತು ಎಂದರು.
ದೇವಳದ ಆನುವಂಶಿಕ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ ಸಚಿವರನ್ನು ಸ್ವಾಗತಿಸಿದರು. ಈಶ್ವರಪ್ಪ ಪತ್ನಿ ವಿಜಯಲಕ್ಷ್ಮಿ, ಪುತ್ರಿ ಕನಕಾ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ, ಮೋದಿ ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ಸ್ಥಳೀಯ ಬಿಜೆಪಿ ಮುಖಂಡ ಗಣೇಶ್ ಭಟ್, ರೈತ ಮೋರ್ಚಾ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಕಾರ್ಯದರ್ಶಿ ಧೀರಜ್, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕ ಚಂದ್ರಕಾಂತ್ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ ಇದ್ದರು.
