ಅನಿವಾಸಿ ಭಾರತೀಯರು (ಎನ್ಆರ್ ಐ) ಆನ್ ಲೈನ್ ನಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ :ಭಾರತೀಯ ಚುನಾವಣಾ ಆಯೋಗ – Vishwanews24

Featured, ರಾಷ್ಟ್ರ ನ್ಯೂಸ್
ನವದೆಹಲಿ: ಈ ವರ್ಷ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಆನ್ ಲೈನ್ ಮೂಲಕ ಮತ ಚಲಾಯಿಸುವ ಸೌಲಭ್ಯ ಹೊಂದಿರುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
 ಚುನಾವಣಾ ಆಯೋಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಈ ರೀತಿಯ ಯಾವುದೇ ವಿಶೇಷ ಸೌಲಭ್ಯವನ್ನು ಇನ್ನೂ ಹೊಂದಿಲ್ಲ ಎಂದು ಆಯೋಗದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಒಂದು ವೇಳೆ ಅನಿವಾಸಿ ಭಾರತೀಯರು ಆನ್ ಲೈನ್ ಮೂಲಕ ತಮ್ಮ ಮತ ಚಲಾಯಿಸಬೇಕೆಂದರೆ ಜನರ ಪ್ರಾತಿನಿಧಿತ್ವ ಕಾಯ್ದೆಗೆ ತಿದ್ದುಪಡಿ ತರಬೇಕು. ಇದುವರೆಗೆ ಈ ಕಾಯ್ದೆಗೆ ಅಂತಹ ಯಾವುದೇ ತಿದ್ದುಪಡಿ ತಂದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯದ ಮಟ್ಟಿಗೆ ಸಾಗರೋತ್ತರ ಭಾರತೀಯ ಮತದಾರರು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ದಾಖಲು ಮಾಡಿಕೊಂಡು ಭಾರತಕ್ಕೆ ಬಂದು ತಮ್ಮ ಕ್ಷೇತ್ರಕ್ಕೆ ಹೋಗಿ ತಮ್ಮ ಮೂಲ ಪಾಸ್ ಪೋರ್ಟ್ ತೋರಿಸಿ ಮತ ಚಲಾಯಿಸಬೇಕಾಗುತ್ತದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶ ಪ್ರಕಾರ ವಿವಿಧ ದೇಶಗಳಲ್ಲಿ ಸುಮಾರು 3.10 ಕೋಟಿ ಎನ್ ಆರ್ ಐಗಳು ವಾಸಿಸುತ್ತಿದ್ದಾರೆ.