ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಮಂಜುನಾಥ್ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯಡಿಯೂರಪ್ಪ -Vishwanews24
ಬೆಂಗಳೂರು :ಬುಧವಾರ ರಾತ್ರಿ ಬೈಕ್ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ‘ಪ್ರಜಾವಾಣಿ’ಯ ಹಾವೇರಿ ಜಿಲ್ಲಾಹಿರಿಯ ವರದಿಗಾರ ಎಂ.ಸಿ. ಮಂಜುನಾಥ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜುನಾಥ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಮೃತ ಪಟ್ಟ ಪತ್ರ ಕರ್ತ ಮಂಜುನಾಥ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಹಾವೇರಿ ಜಿಲ್ಲೆಯ ಪ್ರಜಾವಾಣಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ರಾತ್ರಿ ಕೊಡಗನೂರು ಬಳಿ ನಡೆದ ಬೈಕ್ ಅಪಘಾತದಲ್ಲಿ ಮಂಜುನಾಥ್ ಮೃತಪಟ್ಟಿದ್ದರು.
ಪ್ರಜಾವಾಣಿ ಪತ್ರಿಕೆಯ ಹಾವೇರಿ ಜಿಲ್ಲಾ ವರದಿಗಾರ ಎಂ.ಸಿ. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಂಜುನಾಥ್ ಅವರ ಅಕಾಲಿಕ ನಿಧನದಿಂದ ಒಬ್ಬ ಯುವ, ಉತ್ಸಾಹಿ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
