ಅಪಘಾತದಲ್ಲಿ ಸಾವಿಗೀಡಾದ ನಟಿ ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ – vishwanews24
ಅಪಘಾತದಲ್ಲಿ ಸಾವಿಗೀಡಾದ ನಟಿ ಪವಿತ್ರಾ ಜಯರಾಮ್ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ
ಕೆಲವೇ ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಅವರು ರಸ್ತೆ ಅಪಘಾತದಲ್ಲಿ ನಿಧನರಾದರು. ಈಗ ಇನ್ನೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಪವಿತ್ರಾ ಜಯರಾಮ್ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದು ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಜಯರಾಮ್ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ತೆಲುಗಿನ ಹಲವು ಧಾರಾವಾಹಿಗಳಲ್ಲಿ ಚಂದು ನಟಿಸುತ್ತಿದ್ದರು. ಇತ್ತೀಚೆಗೆ ಅವರು ಪವಿತ್ರಾ ಜಯರಾಮ್ ಜೊತೆ ಬೆಂಗಳೂರಿಗೆ ಬಂದಿದ್ದರು. ಸಿನಿಮಾವೊಂದಕ್ಕೆ ಸಹಿ ಮಾಡಿದ ಬಳಿಕ ಅವರು ಪುನಃ ಹೈದರಾಬಾದ್ಗೆ ಹಿಂದಿರುಗುವಾಗ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಚಂದುಗೆ ಪೆಟ್ಟಾಗಿತ್ತು. ಅದನ್ನು ನೋಡಿ ಗಾಬರಿಗೊಂಡ ಪವಿತ್ರಾ ಅವರ ಉಸಿರು ನಿಂತುಹೋಗಿತ್ತು. ಆ ದುರಂತದ ನೆನಪು ಮಾಸುವುದಕ್ಕೂ ಮುನ್ನವೇ ಚಂದು ನಿಧನರಾಗಿದ್ದಾರೆ.
ಹೈದರಾಬಾದ್ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. 2015ರಲ್ಲಿ ಶಿಲ್ಪಾಳನ್ನು ಪ್ರೀತಿಸಿ ಚಂದು ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೈದರಾಬಾದ್ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜನಪ್ರಿಯ ‘ತ್ರಿನಯನಿ’ ಧಾರಾವಾಹಿಯಲ್ಲಿ ಚಂದು ಹಾಗೂ ಪವಿತ್ರಾ ಜಯರಾಮ್ ಅವರು ಒಟ್ಟಿಗೆ ನಟಿಸುತ್ತಿದ್ದರು. ಪವಿತ್ರಾ ನಿಧನದ ಬಳಿಕ ಈ ಧಾರಾವಾಹಿ ತಂಡದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿತ್ತು. ಈಗ ಚಂದು ಕೂಡ ನಿಧನರಾಗಿರುವುದರಿಂದ ಎಲ್ಲರಿಗೂ ಆಘಾತ ಆಗಿದೆ.
