ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿಯ ಧ್ಯೇಯವಾಗಿತ್ತು, ಇಷ್ಟು ವರ್ಷಗಳ ಕಾಯುವಿಕೆಯು ಕೊನೆಗೂ ಸಾರ್ಥಕವಾಯಿತು : ಎಲ್‌.ಕೆ.ಆಡ್ವಾಣಿ -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ‘ರಾಮಮಂದಿರಕ್ಕೆ ಭೂಮಿಪೂಜೆ ನೆರವೇರುತ್ತಿರುವುದು ಒಂದು ಐತಿಹಾಸಿಕ ಹಾಗೂ ಭಾವನಾತ್ಮಕ ಕ್ಷಣ. ಇಷ್ಟು ವರ್ಷಗಳ ಕಾಯುವಿಕೆಯು ಕೊನೆಗೂ ಸಾರ್ಥಕವಾಯಿತು.’ ಎಂದೂ  ಬಿಜೆಪಿ ಹಿರಿಯ ಮುತ್ಸದ್ಧಿ, ರಾಮಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿದ್ದ ಎಲ್‌.ಕೆ.ಆಡ್ವಾಣಿ ಹೇಳಿದ್ದಾರೆ.

ಭೂಮಿಪೂಜೆ ಹಿನ್ನೆಲೆಯಲ್ಲಿ ಮಂಗಳವಾರ ಈ ಹೇಳಿಕೆ ನೀಡಿರುವ 92 ವರ್ಷ ವಯಸ್ಸಿನ ಆಡ್ವಾಣಿ, “ಇದು ಕೇವಲ ನನಗೆ ಮಾತ್ರವಲ್ಲ, ಎಲ್ಲ ಭಾರತೀಯರಿಗೂ ಐತಿಹಾಸಿಕ ಮತ್ತು ಭಾವನಾತ್ಮಕ ದಿನವಾಗಿದೆ. ರಾಮಜನ್ಮಭೂಮಿ ಚಳವಳಿಯ ಸಮಯದಲ್ಲಿ ವಿಧಿಯು ನನಗೆ ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮ ರಥಯಾತ್ರೆಯ ರೂಪದಲ್ಲಿ ಪವಿತ್ರ ಕಾರ್ಯವೊಂದನ್ನು ನೆರವೇರಿಸಲು ಅವಕಾಶ ಕಲ್ಪಿಸಿತು. ಅಂದಿನ ಯಾತ್ರೆಯು ಅಪರಿಮಿತ ಭಕ್ತಾದಿಗಳ ಆಕಾಂಕ್ಷೆ, ಶಕ್ತಿ ಹಾಗೂ ಉತ್ಸಾಹವನ್ನು ತೋರಿಸಿತು’ ಎಂದಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿಯ ಧ್ಯೇಯವಾಗಿತ್ತು. ಇಂದಿನ ಈ ಶುಭಸಂದರ್ಭದಲ್ಲಿ ನಾನು, ರಾಮಜನ್ಮಭೂಮಿ ಚಳವಳಿಗೆ ಮೌಲ್ಯಯುತ ಕೊಡುಗೆಗಳನ್ನು ನೀಡಿದ, ತ್ಯಾಗಗಳನ್ನು ಮಾಡಿದ ಸಂತರು, ನಾಯಕರು ಹಾಗೂ ದೇಶ-ವಿದೇಶಗಳಲ್ಲಿನ ಜನರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದೂ ಆಡ್ವಾಣಿ ಹೇಳಿದ್ದಾರೆ.

ಶ್ರೀರಾಮ ಮಂದಿರವು ಭಾರತವನ್ನು ಒಂದು ಬಲಿಷ್ಠ, ಸಮೃದ್ಧ, ಶಾಂತಿಯುತ ಹಾಗೂ ಸಾಮರಸ್ಯಭರಿತ ದೇಶವನ್ನಾಗಿ ಪ್ರತಿನಿಧಿಸಲಿದೆ ಮತ್ತು ಎಲ್ಲರಿಗೂ ನ್ಯಾಯ ಒದಗಿಸುವ, ಯಾರನ್ನೂ ಹೊರಗಿಡದ ರಾಮರಾಜ್ಯವು ಸೃಷ್ಟಿಯಾಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದೂ ಆಡ್ವಾಣಿ ಅವರು ನುಡಿದಿದ್ದಾರೆ.