ಅವಕಾಶ ಸಿಕ್ಕರೆ ಸರ್ಕಾರ ರಚಿಸಿ : ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ

Featured, ರಾಜ್ಯ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ಬಿಜೆಪಿ ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಕ್ಕಿದ್ದು, ಮಕರ ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಕ್ರಮಣ ಸಂಭವಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಈ ಹಿಂದೆ ಆಪರೇಷನ್ ಕಮಲ ಮಾಡದಂತೆ ಸೂಚನೆ ನೀಡಿದ್ದ ಹೈಕಮಾಂಡ್ ಇದೀಗ ಗ್ರೀನ್ ಸಿಗ್ನಲ್ ನೀಡಿದೆ. ಸರಕಾರ ರಚನೆ ಮಾಡಲು ಅವಕಾಶಗಳಿದ್ದರೆ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಹೈಕಮಾಂಡ್ ರಾಜ್ಯ ಬಿಜೆಪಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ ವರಿಷ್ಠರ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಹಾಗಾಗಿ ಜ.15ರ ನಂತರ ಬದಲಾದ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ, ಸರ್ಕಾರ ರಚನೆ ಮಾಡುವ ಗಂಭೀರ ಪ್ರಯತ್ನ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ನಾಯಕರ ಮಟ್ಟದಲ್ಲೇ ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಿಂದೆ ಸರ್ಕಾರ ರಚನೆಗೆ ನಡೆಸಿದ ಪ್ರಯತ್ನ ವಿಫ‌ಲವಾಗಿ ಹಿನ್ನಡೆ ಅನುಭವಿಸುವ ಜತೆಗೆ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗಿದ್ದು, ಪಕ್ಷದ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ವರಿಷ್ಠರ ಸಹಮತವಿಲ್ಲದೇ ಮತ್ತೆ ಸರ್ಕಾರ ರಚನೆಗೆ ಪ್ರಯತ್ನ ನಡೆಸುವ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲೂ ಗೊಂದಲವಿತ್ತು. ಅಂತಿಮವಾಗಿ ಅವಕಾಶ ಸಿಕ್ಕರೆ ಸರ್ಕಾರ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಸಿಕ್ಕಿದ್ದು, ಸರ್ಕಾರ ರಚಿಸುವ ಹುಮ್ಮಸ್ಸಿಗೆ ಹೆಚ್ಚು ಬಲ ಬಂದಂತಾಗಿದೆ ಎಂದು ಉನ್ನತ  ಮೂಲಗಳು ತಿಳಿಸಿವೆ.

ಪೂರಕ ಸನ್ನಿವೇಶ ನಿರ್ಮಾಣವಾದರೆ ಸರ್ಕಾರ ರಚನೆಗೆ ಗ್ರೀನ್‌ ಸಿಗ್ನಲ್‌ ತೋರಿರುವ ವರಿಷ್ಠರು, ಯಾವುದೇ ಕಾರಣಕ್ಕೂ ಸರ್ಕಾರ ರಚನೆ ಪ್ರಯತ್ನ ನಡೆಸಿದರೆ ವಿಫ‌ಲವಾಗಬಾರದು. ಸುಸ್ಥಿರ ಸರ್ಕಾರ ರಚನೆಗೆ ಪೂರಕ ವ್ಯವಸ್ಥೆ ಮಾಡಿಕೊಂಡು ಖಾತರಿಯಾದ ಬಳಿಕವಷ್ಟೇ ಕಾರ್ಯಪ್ರವೃತ್ತವಾಗಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ ಎನ್ನಲಾಗಿದೆ.