ಆಕರ್ಷಣೀಯ ಪ್ರವಾಸಿ ತಾಣ ಮಲ್ಪೆ ಸೇಂಟ್ ಮೇರಿಸ್ ದ್ವೀಪಕ್ಕೆ ಸ್ಪೀಡ್‌ಬೋಟ್‌ ಸೇವೆ ಆರಂಭ -Vishwanews24

Featured, ಉದ್ಯೋಗ ಮಾಹಿತಿ

ಮಲ್ಪೆ: ಕರಾವಳಿಯ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣ ಮಲ್ಪೆ ಸೈಂಟ್‌ಮೇರಿಸ್ ದ್ವೀಪಕ್ಕೆ ಸ್ಪೀಡ್‌ಬೋಟ್‌ ಸೇವೆ ಸೆ. 15ರಿಂದ ಆರಂಭಗೊಂಡಿದೆ. ಇದು ಮಲ್ಪೆ ಬೀಚ್‌ನಿಂದ ಹೊರಡಲಿದ್ದು ಕೇವಲ 15ನಿಮಿಷಗಳಲ್ಲಿ ತಲುಪಲು ಸಾಧ್ಯವಾಗಲಿದೆ.

ಜೈ ಹನುಮಾನ್‌, ಜ್ಞಾನಜ್ಯೋತಿ, ಸೀಬರ್ಡ್‌ ಮತ್ತು ಇಂಡಿಯನ್‌ ಒಟ್ಟು 4 ಸ್ಪೀಡ್‌ ಬೋಟ್‌ಗಳು ಸೇವೆಗೆ ಇದೆ. ಒಂದು ಬೋಟಿನಲ್ಲಿ ಚಾಲಕರು,ನಿರ್ವಾಹಕರು ಸೇರಿದಂತೆ 14 ಮಂದಿಗೆ ಮಾತ್ರ ತೆರಳಲು ಅವಕಾಶ ವಿದ್ದು, ಯಾನಕ್ಕಾಗಿ ಕಾಯುವ ಪ್ರಮೇಯ ಇರುವುದಿಲ್ಲ. ಮಾತ್ರವಲ್ಲದೆ ದ್ವೀಪದಲ್ಲೂ ಹೆಚ್ಚು ಹೊತ್ತು ಸುತ್ತಾಡಿ ಕಾಲ ಕಳೆಯುವ ಅವಕಾಶ ನೀಡ ಲಾಗುತ್ತದೆ.

ಬೋಟ್‌ಗಳು ಅತ್ಯಾಧುನಿಕ ಸೌಕರ್ಯ ಹೊಂದಿದ್ದು, ಪ್ರತಿ ಬೋಟಿನಲ್ಲಿ ಇಬ್ಬರು ನುರಿತ ಈಜುಗಾರರು, ಲೈಫ್‌ಬಾಯ್‌, ಲೈಫ್‌ ಜಾಕೆಟ್‌ ಸಹಿತ ಸುರಕ್ಷಿತ ಸಾಧನಗಳು ಪ್ರಯಾಣಿಕರಿಗೆ ಲಭಿಸಲಿದೆ.

ಕಳೆದ 11 ವರ್ಷಗಳಿಂದ ಬೋಟಿ ನಲ್ಲಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾ, ಉತ್ತಮ ಸೇವೆ ಕಾಪಾಡಿ ಕೊಂಡು ಬಂದಿದ್ದು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಂದ ಸಂಸ್ಥೆಗೆ ಪ್ರಶಂಸಾ ಪತ್ರ ದೊರಕಿದೆ. ಸ್ಪೀಡ್‌ಬೋಟ್‌ನ ಟಿಕೆಟ್‌ ಕೌಂಟರ್‌ನ್ನು ಬೀಚ್‌ ಗಾಂಧಿ ಪ್ರತಿಮೆಯ ಬಳಿ ತೆರೆಯಲಾಗಿದೆ ಎಂದು ಟೂರಿಸ್ಟ್‌ ಬೋಟಿನ ಪ್ರಮುಖ ನಿರ್ವಾಹಕ ಸನತ್‌ ಸಾಲ್ಯಾನ್‌ ತಿಳಿಸಿದ್ದಾರೆ.

ಸದ್ಯ ಆರಂಭಗೊಂಡ ಬೀಚ್ ಸ್ಪೀಡ್ ಬೋಟ್‌ಗಳಲ್ಲಿ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿದ್ದರೂ(ಕನಿಷ್ಠ 4 ಮಂದಿ) ಅವರನ್ನು ದ್ವೀಪಕ್ಕೆ ಕರೆದೊಯ್ಯಲಾಗುತ್ತದೆ. ಬೆಳಗ್ಗೆ 8ರಿಂದ ಸಾಯಂಕಾಲ 5.30 ಗಂಟೆವರೆಗೆ ಬೀಚ್ ಬೋಟುಗಳು ಕಾರ್ಯನಿರ್ವಹಿಸುತ್ತವೆೆ. ಈ ಬೋಟ್‌ನಲ್ಲಿ 12 ಪ್ರವಾಸಿಗರು ಕುಳಿತುಕೊಳ್ಳಬಹುದು. ಬೀಚ್‌ನಿಂದ ತೆರಳಲು 15 ನಿಮಿಷ ಅವಧಿ ಬೇಕಾಗುತ್ತದೆ, ಪ್ರವಾಸಿಗರಿಗೆ ಸಮಯದ ನಿರ್ಬಂಧವಿಲ್ಲ.