ಆನ್ಲೈನ್ನಲ್ಲಿ ಔಷಧಿ ಮಾರಾಟ ನಿಷೇಧ..
ನವದೆಹಲಿ: ಔಷಧಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವುದನ್ನು ನಿಷೇಧಿಸಿ ದೆಹಲಿ ಹೈಕೋರ್ಟ್ ಆದೇಶಿಸಿದ್ದು, ತಕ್ಷಣದಿಂದಲೇ ಇದನ್ನು ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಆನ್ಲೈನ್ ಮೂಲಕ ಔಷಧಿ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಬೇಕು ಎಂದು ಡಾ.ಜಹೀರ್ ಅಹಮ್ಮದ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕೆ.ರಾವ್ ಮತ್ತು ರಾಜೇಂದ್ರ ಮೆನನ್ ಇದ್ದ ದ್ವಿಸದಸ್ಯ ಪೀಠ ಆನ್ಲೈನ್ನಲ್ಲಿ ಔಷಧಿ ಮಾರಾಟಕ್ಕೆ ಸದ್ಯ ತಡೆಯಾಜ್ಞೆ ನೀಡಿದೆ..
ಈ ಹಿಂದೆ ಇದರ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ, ದೆಹಲಿ ಸರ್ಕಾರ ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ಗೆ ಹೈಕೋರ್ಟ್ ಸೂಚಿಸಿತ್ತು. ಸದ್ಯ ಆನ್ಲೈನ್ ಮಾರಾಟಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, 2019ರ ಮಾರ್ಚ್ 25ಕ್ಕೆ ವಿಚಾರಣೆಯನ್ನ ಮುಂದೂಡಿದೆ.
ಆನ್ ಲೈನ್ ಮೂಲಕ ಔಷಧ ಮಾರಾಟದ ಉದ್ದೇಶ ಕೇವಲ ಲಾಭ ಗಳಿಸುವುದು ಮಾತ್ರ ಆಗಿರುತ್ತದೆ. ಇದರ ಪರಿಣಾಮ ಅನೇಕ ಜನರ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಅಲ್ಲದೆ ಇದರ ಪರಿಣಾಮದಿಂದ ನಂತರ ವೈದ್ಯರಿಗೆ ಚಿಕಿತ್ಸೆ ನೀಡುವುದು ಕೂಡಾ ಸವಾಲಿನ ಕೆಲಸ ಆಗಿರುತ್ತದೆ ಎಂದು ಪಿಐಎಲ್ ಸಲ್ಲಿಸಿದ್ದರು. .
ಆನ್ಲೈನ್ನಲ್ಲಿ ಅಕ್ರಮವಾಗಿ ಔಷಧಿ ಮಾರಾಟ, ಗ್ರಾಹಕರ ಆರೋಗ್ಯದ ಮತ್ತು ಮಾನಸಿಕ ನೆಮ್ಮದಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಅಲ್ಲದೇ ಔಷಧಿಗಳ ದುರ್ಬಳಕೆ ಕೂಡ ಹೆಚ್ಚಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
