ಇಂದಿನಿಂದ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭ -Vishwanews24

Featured, ರಾಷ್ಟ್ರ ನ್ಯೂಸ್

ಇಂದಿನಿಂದ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭ -Vishwanews24

ನವದೆಹಲಿ : ಇಂದಿನಿಂದ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಇದೇ ಮೊದಲ ಬಾರಿಗೆ ಎರಡೂ ಸದನಗಳನ್ನೂ ಬಳಸಿಕೊಂಡು ಒಂದು ಸದನ ಕಲಾಪ ನಡೆಸಲಾಗುತ್ತಿದೆ.

ಒಂದು ಕಲಾಪದಿಂದ ಮತ್ತೊಂದು ಕಲಾಪಕ್ಕೆ ಆರು ತಿಂಗಳ ಕಾಲದ ಅಂತರವಿರಬಾರದು ಎಂಬ ನಿಯಮದ ಪ್ರಕಾರವಾಗಿ ಕೊರೊನಾ ನಡುವೆಯೂ ಈ ಕಲಾಪವನ್ನು ನಡೆಸಲಾಗುತ್ತಿದ್ದು ಈ ಅಧಿವೇಶನವೂ ಎಂದಿಗಿಂತ ವಿಭಿನ್ನವಾಗಿ ನಡೆಯಲಿದೆ. ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿಟ್ಟಿನಲ್ಲಿ ಎರಡು ಪಾಳಿಗಳಲ್ಲಿ ಕಲಾಪ ನಡೆಸಲಾಗುತ್ತಿದೆ.

ಸೋಮವಾರದಿಂದ ಅ. 1ರ ವರೆಗೆ ಕಲಾಪ ನಡೆಯಲಿದ್ದು ಈ ಬಾರಿ ಯಾವುದೇ ವಾರಾಂತ್ಯಗಳೂ, ಸರ್ಕಾರಿ ರಜೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸತತ 18 ದಿನ ಕಲಾಪ ನಡೆಸಲು ಉದ್ದೇಶಿಸಲಾಗಿದೆ. ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸದನದಲ್ಲಿ ಬಿಜೆಪಿ ಸರ್ಕಾರವು 45 ಮಸೂದೆಗಳನ್ನು ಮಂಡಿಸಲು ಉದ್ದೇಶಿಸಿದ್ದು, ಈ ಪೈಕಿ ಕೆಲವನ್ನು ಖಡಾಖಂಡಿತವಾಗಿ ವಿರೋಧಿಸಲು ವಿರೋಧ ಪಕ್ಷಗಳು ಸಜ್ಜಾಗಿದೆ. ಹಾಗೆಯೇ ದೇಶದಲ್ಲಿ ಉಂಟಾದ ಕೊರೊನಾ ಬಿಕ್ಕಟ್ಟು, ಆರ್ಥಿಕ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಜಿಡಿಪಿ ಕುಸಿತ, ಚೀನಾ ಗಡಿ ಬಿಕ್ಕಟ್ಟು, ಬೆಲೆ ಏರಿಕೆ, ಜಿಎಸ್‌ಟಿ ನಷ್ಟ ಪರಿಹಾರ ವಿಚಾರ ಮೊದಲಾದವುಗಳನ್ನು ಮುಂದಿಟ್ಟು ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಕೂಡಾ ವಿರೋಧ ಪಕ್ಷಗಳು ತಯಾರಾಗಿದೆ.