ಇದು ಮೋದಿಗೆ ಅಪ್ಪುಗೆಯಲ್ಲ, ‘ಆಘಾತ’ ; ರಾಹುಲ್‍ ಗೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದ ಶಿವಸೇನೆ

Featured, ದೇಶ

ಹೊಸದಿಲ್ಲಿ,:  ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯದ ಮತದಾನದಿಂದ ಹೊರಗುಳಿಯುವ ಮೂಲಕ ಕೇಂದ್ರದಲ್ಲಿ ಆಡಳಿತಾರೂಢ ಎನ್‍ ಡಿಎ ಅಂಗಪಕ್ಷವಾಗಿರುವ ಶಿವಸೇನೆ ಮತ್ತೆ ಬಿಜೆಪಿಗೆ ಮುಜುಗರ ಉಂಟುಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ ಶಿವಸೇನೆ ರಾಹುಲ್ ಭಾಷಣವನ್ನು ಶ್ಲಾಘಿಸಿದೆ. ಭಾಷಣದ ಕೊನೆಯಲ್ಲಿ ರಾಹುಲ್, ಪ್ರಧಾನಿ ಮೋದಿಯವರನ್ನು ಆಲಂಗಿಸಿಕೊಂಡ ಕ್ರಮವನ್ನು ಬಿಜೆಪಿ ಹಾಗೂ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಟೀಕಿಸಿದ್ದರು.

“ರಾಹುಲ್‍ಗಾಂಧಿಯವರು ರಿಯಲ್ ಸ್ಕೂಲ್ ಆಫ್ ಪೊಲಿಟಿಕ್ಸ್‍ನಿಂದ ಪದವಿ ಪಡೆದಿದ್ದಾರೆ” ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಬಣ್ಣಿಸಿದರು.

ರಾಜಕೀಯವಾಗಿ ಮಗು ಎಂದು ಇತರ ಎನ್‍ಡಿಎ ಮಿತ್ರಪಕ್ಷಗಳು ರಾಹುಲ್ ಅವರನ್ನು ಕಡೆಗಣಿಸುತ್ತಿದ್ದರೆ, ರಾಹುಲ್‍ ಗೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಬಹಿರಂಗವಾಗಿ ಹೇಳಿದ ಮೊಟ್ಟಮೊದಲ ವಿರೋಧ ಪಕ್ಷ ಇದಾಗಿದೆ. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲ ರಾಹುಲ್ ಅವರ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಲೇವಡಿ ಮಾಡುತ್ತಿದ್ದರೆ, ಶಿವಸೇನೆ ಅವರ ಬೆಂಬಲಕ್ಕೆ ನಿಂತಿತ್ತು.

ರಾಹುಲ್ ಅವರ ಈ ಅನಿರೀಕ್ಷಿತ ಕ್ರಮ ಮೋದಿಯವರಿಗೂ ಶಾಕ್ ನೀಡಿದೆ. “ಇದು ಮೋದಿಗೆ ಅಪ್ಪುಗೆಯಲ್ಲ; ಆಘಾತ” ಎಂದು ಎದುರಾಳಿಗಳಿಗೆ ರಾವತ್ ಎದುರೇಟು ನಿಡಿದ್ದಾರೆ. ಇದು ನಾಟಕ ಎಂದು ಜನ ಹೇಳುತ್ತಾರೆ. ಆದರೆ ರಾಜಕೀಯದಲ್ಲಿ ನಾಟಕವೂ ಇರುತ್ತದೆ ಎಂದು ರಾವತ್ ಹೇಳಿದ್ದಾರೆ. ಕೊನೆಕ್ಷಣದಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಭಾಗವಹಿಸುವುದರಿಂದ ದೂರ ಇರುವ ನಿರ್ಧಾರವನ್ನು ಶಿವಸೇನೆ ಪ್ರಕಟಿಸಿತ್ತು.