ಉಡುಪಿಗೊಂದು ಏರ್‌ಪೋರ್ಟ್: ಗರಿಗೆದರಿದ ಕನಸು

ಅದೃಷ್ಟ ಖುಲಾಯಿಸುವುದೇ?: ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಒತ್ತಿನೆಣೆ ಪ್ರದೇಶದ ಸ.ನಂ. 268/1ರಲ್ಲಿ 454.81 ಎಕರೆ, ಸ.ನಂ. 241/1ರಲ್ಲಿ 1314.87 ಎಕರೆ ಜಾಗ ಇದೆ. ಸ.ನಂ. 268ರಲ್ಲಿ ಪಹಣಿ ಕಾಲಂ 9ರಲ್ಲಿ ಬೈಂದೂರು ಮೀಸಲು ಅರಣ್ಯ ಎಂದು ದಾಖಲಿಸಲಾಗಿದ್ದು, ಈ ಪ್ರದೇಶದಲ್ಲಿ ಕುರುಚಲು ಗಿಡಗಳು ಮಾತ್ರ ಇವೆ. ಈ ಪ್ರದೇಶದಲ್ಲಿ ಹಿಂದೆ ಬಾಕ್ಸೈಟ್ ಗಣಿಗಾರಿಕೆ ನಡೆದಿತ್ತು. ಈ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಆಕ್ಷೇಪರಹಿತ ಜಮೀನಿನ ಬಗ್ಗೆ ಅರಣ್ಯ ಮತ್ತು ಭೂವಿಜ್ಞಾನ ಇಲಾಖೆಯ ಅಭಿಪ್ರಾಯ ಪಡೆಯುವಂತೆ ಜಿಲ್ಲಾಧಿಕಾರಿ ವರದಿಯಲ್ಲಿ ನಿಗಮದ ಗಮನ ಸೆಳೆದಿದ್ದಾರೆ.
ಅಭಿವೃದ್ಧಿಗೆ ಹೊಸದಿಕ್ಕು
ಕುಂದಾಪುರ, ಬೈಂದೂರು, ಭಟ್ಕಳ ಭಾಗದ ಜನರು ಮಂಗಳೂರು ಅಥವಾ ಗೋವಾ ವಿಮಾನ ನಿಲ್ದಾಣಕ್ಕೆ ತೆರಳಲು ಸಾಕಷ್ಟು ಹಣ ಮತ್ತು ಸಮಯ ವ್ಯಯಿಸಬೇಕಾಗಿದೆ. ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದಲ್ಲಿ ಈ ಭಾಗದ ಸಾವಿರಾರು ಜನರಿಗೆ ಪ್ರಯೋಜನವಾಗುತ್ತದೆ. ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರಿ ಉತ್ತೇಜನ ಸಿÜಗುತ್ತದೆ. ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯ ಹಲವು ಪ್ರವಾಸಿ ಸ್ಥಳಗಳು, ಪ್ರಸಿದ್ಧ ದೇವಸ್ಥಾನಗಳನ್ನು ಸಂದರ್ಶಿಸುವ ದೇಶ-ವಿದೇಶಗಳ ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗುತ್ತದೆ.
ಮೀಸಲು ಅರಣ್ಯ ಪುನರ್ ವಿಂಗಡಣೆಗೆ ಮನವಿ
ಒತ್ತಿನೆಣೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸಾಕಷ್ಟು ಅನುಕೂಲಕರವಾದ ಜಮೀನು ಲಭ್ಯವಿದ್ದರೂ ಸ.ನಂ. 268ರಲ್ಲಿ ಪಹಣಿ ಕಾಲಂ 9ರಲ್ಲಿ ಬೈಂದೂರು ಮೀಸಲು ಅರಣ್ಯ ಎಂದು ದಾಖಲಿಸಿರುವುದು ಯೋಜನೆಗೆ ತೊಡಕಾಗಿದೆ. ಈ ಜಾಗವನ್ನು ಮೀಸಲು ಅರಣ್ಯದಿಂದ ಪುನರ್ ವಿಂಗಡಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಅಲ್ಲದೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವಂತೆ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಧನಂಜಯ ಅವರಿಗೂ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ನಮ್ಮ ಕುಂದಾಪುರ ಕನ್ನಡ ಬಳಗ ಗಳ್ಫ್ ಸಂಘಟನೆಯೂ ಕರ್ನಾಟಕ ಮುಖ್ಯಮಂತ್ರಿಗೆ ಮನವಿ ಮಾಡಿದೆ.
– ರಿಯಾಜ್ ಅಹಮದ್ ಬೈಂದೂರು, ಸಾಮಾಜಿಕ ಹೋರಾಟಗಾರರು
