ಉಡುಪಿ :ಇಲ್ಲಿನ ಸಂತೆಕಟ್ಟೆಯ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಭೀಕರ ಅಪಘಾತ ನಡೆದಿದ್ದು ಓರ್ವ ಸಾವನ್ನಪ್ಪಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬ್ರಹ್ಮಾವರ ಕಡೆಯಿಂದ ಉಡುಪಿಗೆ ತೆರಳುತ್ತಿದ್ದ ಕಾರು ಡಿವೈಡರ್ ಹಾರಿ ಉಡುಪಿಯಿಂದ ಬ್ರಹ್ಮಾವರ ಕಡೆಗೆ ತೆರಳುತ್ತಿದ್ದ ಟೆಂಪೋಗೆ ಮುಖಾಮುಖೀ ಢಿಕ್ಕಿಯಾಗಿದೆ. ಪರಿಣಾಮವಾಗಿ ಟೆಂಪೋ ಚಾಲಕ ಉಡುಪಿಯ ನಿಟ್ಟೂರಿನ ಅಶೋಕ್ ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟೆಂಪೋದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ಚಾಲಕ(ವೈದ್ಯ ಎನ್ನಲಾಗಿದೆ) ಮತ್ತು ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ರಸ್ತೆಯಲ್ಲಿದ್ದ ಹೊಂಡ ತಪ್ಪಿಸಲು ಹೋಗಿ ಕಾರು ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.