ಉಡುಪಿ: ಎನ್ ಎಸ್ ಯು ಐ ಮುಖಂಡ ಶರತ್ ಕುಂದರ್ ಮೇಲೆ ಹಲ್ಲೆ ಪ್ರಕರಣ : ಐವರ ಬಂಧನ – vishwanews24

Featured, ಉಡುಪಿ

ಉಡುಪಿ: ಎನ್ ಎಸ್ ಯು ಐ ಮುಖಂಡ ಶರತ್ ಕುಂದರ್ ಮೇಲೆ ಹಲ್ಲೆ ಪ್ರಕರಣ : ಐವರ ಬಂಧನ

ಉಡುಪಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಬಳಿಕ ಎನ್ ಎಸ್ ಯು ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ

ಜನವರಿ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಪಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್ (25) ಅವರು ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹಕುನಾ ಮಟಾಟ ಹೋಟೆಲ್ಗೆ ಊಟಕ್ಕೆ ತೆರಳಿದ್ದರು. ಅಲ್ಲಿ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ ಮಾಲಕರ ಮಗನೊಂದಿಗೆ ಸಣ್ಣ ವಿಚಾರಕ್ಕೆ ಸಂಬಂಧಿಸಿ ಬಾಯಿ ಮಾತಿನ ಗಲಾಟೆ ನಡೆದಿದೆ.

ಇದನ್ನೂ ಓದಿ: 

ರಾಜ್ಯ ಸರ್ಕಾರ ಸಹಕರಿಸಿದರೆ ಪಡುಬಿದ್ರಿ ಎರ್ಮಾಳಿನಲ್ಲಿ ವಿಮಾನ ನಿಲ್ದಾಣ : ಸಂಸದ ಕೋಟ ಮನವಿಗೆ ಸ್ಪಂದಿಸಿ ಕೇಂದ್ರ ವಿಮಾನಯಾನ ಸಚಿವರಿಂದ ಪತ್ರ – vishwanews24

ನಂತರ ಶರತ್ ಕುಂದರ್ ಮನೆಗೆ ವಾಪಸ್ಸಾಗುತ್ತಿದ್ದಾಗ ಕಲ್ಸಂಕ ಬಳಿ ತಲುಪುವ ಸಂದರ್ಭದಲ್ಲಿ ಅಕ್ಷತ್ ಪೈ ಕರೆ ಮಾಡಿ, ಹೋಟೆಲ್ನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ರಾತ್ರಿ ಸುಮಾರು 11.30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆಯ ಬದಿಯಲ್ಲಿ ಶರತ್ ಕುಂದರ್ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳು ಏಕಾಏಕಿ ಬಂದು ನಿಂತಿವೆ.

ವಾಹನಗಳಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6-7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ತಲೆಗೆ ಬೀಸಿದ ಆಯುಧವನ್ನು ತಡೆಗಟ್ಟಲು ಕೈ ಚಾಚಿದ ವೇಳೆ ಬಲ ಅಂಗೈ, ಮಧ್ಯ ಬೆರಳು ಹಾಗೂ ಎಡ ಕೈ ಮಣಿಕಟ್ಟು ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 189(2), 191(2), 191(3), 118(2), 109, 351(2) ಹಾಗೂ 190ರಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರು, ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಫೆ. 13ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬಂಧಿಸಿದೆ.

ಇದನ್ನೂ ಓದಿ: 

ಪುಲ್ವಾಮಾ ದಾಳಿಗೆ 7 ವರ್ಷ: ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ – vishwanews24

ಆರೋಪಿಗಳು ಕೃತ್ಯಕ್ಕೆ ಬಳಸಿದ ಹುಂಡೈ ಅವೆನ್ಯೂ ಕಾರು (ಅಂದಾಜು ಮೌಲ್ಯ ₹8 ಲಕ್ಷ) ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply