ಉಡುಪಿ :ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವಂತೆ ಸುನಿಲ್ ಕುಮಾರ್ ಗೆ ಪ್ರಮೋದ್ ಮಧ್ವರಾಜ್ ಮನವಿ
ಉಡುಪಿ :ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವಂತೆ ಸುನಿಲ್ ಕುಮಾರ್ ಅವರಿಗೆ ಪ್ರಮೋದ್ ಮಧ್ವರಾಜ್ ಮನವಿ
ಉಡುಪಿ : ತುಳು ಭಾಷೆಗೆ ರಾಜ್ಯದ ಅಧಿಕೃತ ಸ್ಥಾನಮಾನ ನೀಡುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳು ಪಂಚ ದ್ರಾವಿಡ ಭಾಷೆಗಳೆಂದು ಹೆಸರುವಾಸಿಯಾಗಿವೆ. ಇವುಗಳಲ್ಲಿ ಕನ್ನಡ ಮತ್ತು ತುಳುವಿನ ಮೂಲ ಭಾಷಿಕರ ನೆಲವಾಗಿ ನಮ್ಮ ರಾಜ್ಯವಿರುವುದು ನಮ್ಮ ಹೆಗ್ಗಳಿಕೆ. ಕರ್ನಾಟಕದ ತುಳುನಾಡು ಪ್ರಾಂತ್ಯದಲ್ಲಿ ಅನಾದಿಕಾಲದಿಂದ ಲೂ ಜಾತಿ ಧರ್ಮ ಮತಗಳನ್ನೂ ಮೀರಿ ನಮ್ಮ ಸಂಸ್ಕೃತಿ ಮಾತ್ರವಲ್ಲದೆ ವ್ಯಾವಹಾರಿಕ ಭಾಷೆಯಾಗಿ ತುಳು ಬೆಳೆದುಬಂದಿದೆ. ತುಳು ಭಾಷೆಯ ಇತಿಹಾಸ ಕಳೆದ ಶತಮಾನದಲ್ಲಿ ಅಂಧಕಾರದಲ್ಲಿತ್ತು ಆದರೆ ನಮ್ಮ ಸಂಶೋಧಕರ ಸತತ ಪ್ರಯತ್ನದ ಫಲವಾಗಿ ನಮಗೆ ಇಂದು ತುಳುವಿಗೂ ಸಾವಿರಾರು ವರ್ಷಗಳ ಇತಿಹಾಸವಿದೆ ಮತ್ತು ಹಲವಾರು ವಿಶಿಷ್ಟ ಸಾಹಿತ್ಯದ ಪ್ರಾಚೀನ ಪರಂಪರೆಯಿದೆ ಎಂದು ತಿಳಿದು ಬಂದಿದೆ. ತುಳು ಭಾಷೆಗೆ ತನ್ನದೇ ಆದ ಸ್ವಂತ ಲಿಪಿಯೂ ಇದ್ದು ಸುಮಾರು 10ನೇ ಶತಮಾನದಿಂದ ಅನೇಕ ಕೈಬರಹಗಳು ಮತ್ತು ಹಸ್ತಪ್ರತಿಯ ಕೃತಿಗಳು ದೊರಕಿವೆ. ಇದು ತುಳು ಭಾಷೆಗೆ ತನ್ನದೇ ಆದ ಶಾಸ್ತ್ರೀಯ ಸಾಹಿತ್ಯ ಪರಂಪರೆಯಿದೆ ಎನ್ನುವುದನ್ನು ಸಾರಿ ಹೇಳುತ್ತಿದೆ.

ಕರ್ನಾಟಕದ ಸಂಸ್ಕೃತಿ ಮತ್ತು ಬೆಳವಣಿಗೆಗೆ ತುಳುವರ ಕೊಡುಗೆ ಅಪಾರ. ಯಕ್ಷಗಾನ, ದೈವಾರಾಧನೆ, ನಾಗಾರಾಧನೆ, ಕಂಬಳದಂತಹ ಅನೇಕ ಪರಂಪರೆ ಮಾತ್ರವಲ್ಲದೆ ವೈದ್ಯಕೀಯ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲೂ ತುಳುವರು ಬಹಳ ಮುನ್ನೆಲೆ ಸಾಧಿಸಿದ್ದಾರೆ. ತುಳುವರ ಸತತ ಬೇಡಿಕೆಯನ್ನು ಮನ್ನಿಸಿದ ಸರಕಾರಗಳು ತುಳು ಸಾಹಿತ್ಯ ಅಕಾಡೆಮಿ, ತುಳುಲಿಪಿಗೆ ಮಾನ್ಯತೆ, ತುಳು ಭಾಷೆಯನ್ನು ಶಿಕ್ಷಣದಲ್ಲಿ ಅಳವಡಿಸುವಂತಹ ಅನೇಕ ಕಾರ್ಯಗಳನ್ನು ಮಾಡಿವೆ. ಇವೆಲ್ಲಾ ಸಾಧನೆಗಳ ನಡುವೆಯೂ ತುಳುವಿಗೆ ಇನ್ನೂ ಅಧಿಕೃತ ಭಾಷೆಯ ಸ್ಥಾನಮಾನ ಬೇಡಿಕೆಯಾಗಿ ಉಳಿದಿದೆ.
ವಿದೇಶದಲ್ಲಿ ಹೆಚ್ಚುತ್ತಿರುವ ಮಂಕಿ ಪಾಕ್ಸ್ ಕಾಯಿಲೆ : ದ.ಕ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ – Vishwnaews24
ಸುಮಾರು 1971 ರಿಂದ ಇದುವರೆಗೆ ಸತತವಾಗಿ ತುಳುವರು ತಮ್ಮ ಭಾಷೆಗೆ ಅಧಿಕೃತ ಸ್ಥಾನಮಾನವನ್ನು ಕೇಳುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಈ ಬೇಡಿಕೆಗೆ ಮನ್ನಣೆ ಸಿಗಲೇ ಇಲ್ಲ. ಇತ್ತೀಚೆಗೆ ಅನೇಕ ಯುವಕರು ತುಳು ಪರ ಅಭಿಯಾನಗಳನ್ನೂ ನಡೆಸಿ ತುಳುವನ್ನು ಕನ್ನಡದೊಂದಿಗೆ ತುಳು ಮಾತನಾಡುವ ಪ್ರದೇಶದಲ್ಲಿ ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಿ ರಾಜ್ಯ ಭಾಷೆಯ ಮಾನ್ಯತ ನೀಡಬೇಕೆಂದು ಅಭಿಯಾನಗಳನ್ನೂ ನಡೆಸುತ್ತಿದ್ದಾರೆ.
ಸಂವಿಧಾನದ 347ನೇ ವಿಧಿಯನ್ವಯ, ರಾಜ್ಯದ ನಿರ್ದಿಷ್ಟ ಭಾಗದ ಜನರು ತಮ್ಮ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವ ಇಚ್ಛೆ ವ್ಯಕ್ತಪಡಿಸಿದರೆ ಅದನ್ನು ರಾಜ್ಯ ಸರಕಾರಗಳು ಮನ್ನಿಸಿ ಆ ಭಾಗದ ಅಧಿಕೃತ ಭಾಷೆಯನ್ನಾಗಿಸಬೇಕೆಂದು ನಿರ್ದೇಶನವನ್ನು ನೀಡುತ್ತದೆ. ಇದೇ ಪ್ರಕಾರ ತುಳುವರ ಬೇಡಿಕೆಯನ್ನು ಮನ್ನಿಸಿ ತುಳು ಭಾಷೆಯನ್ನು ತುಳುನಾಡು ಪ್ರಾಂತ್ಯದ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ವಿನಂತಿಸಿದ್ದಾರೆ.
ಕಾರ್ಕಳದಲ್ಲೊಂದು ಬಲು ಅಪರೂಪದ ಮದುವೆ - ಸಪ್ತಪದಿ ತುಳಿದ ವಿಶೇಷ ಜೋಡಿ – Vishwanews24
ಹಾಗೂ ಒಂದು ವೇಳೆ ತುಳು ಕರ್ನಾಟಕದ ಅಧಿಕೃತ ಭಾಷೆಯಾದರೆ ಮುಂದಕ್ಕೆ ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸಲೂ ಸುಲಭವಾಗುತ್ತದೆ. ಗೋವಾ ರಾಜ್ಯದಲ್ಲೂ ಮೊದಲು ಕೊಂಕಣಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿ ಮುಂದೆ 8ನೇ ಪರಿಚ್ಛೇಧಕ್ಕೆ ಸೇರಿಸಲಾಯಿತು. ಇದೇ ಮಾದರಿಯನ್ನು ತುಳುವಿಗೂ ಅನುಸರಿಸಬೇಕು. ನಮ್ಮ ಮಾತೃಭಾಷೆಯ ಬಹುದಿನದ ಬೇಡಿಕೆಯನ್ನು ಪ್ರಾಶಸ್ಯ ನೀಡಿ ರಾಜ್ಯ ಭಾಷೆಯನ್ನಾಗಿಸಿ ಬೇಗನೆ ಮನ್ನಿಸಬೇಕಾಗಿ ಮನವಿಮಾಡಿಕೊಂಡಿದ್ದಾರೆ.
