ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕು ಹಾಗೂ ಕಚೇರಿ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿ ಹಾಗೂ ನಗರಸಭೆಯ ನಿಕಟಪೂರ್ವ ಸದಸ್ಯರ ನಿಯೋಗವು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದೆ.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪೂಜಾರಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗವು, ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ಸಾರ್ವಜನಿಕ ಸೇವೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ ಎಂದು ಗಮನ ಸೆಳೆಯಿತು. ನಗರಸಭೆಯ ಕಚೇರಿ ಸಮಯದಲ್ಲಿಯೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರ ಸೇವೆಗೆ ಲಭ್ಯವಿರುವುದಿಲ್ಲ ಎಂಬ ದೂರುಗಳಿದ್ದು, ಹಿಂದಿನ ನಗರಸಭೆ ಆಡಳಿತದ ಅವಧಿಯಲ್ಲಿ ಅನುಮೋದನೆಗೊಂಡಿದ್ದ ಹಲವು ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು, ಎಸ್‌ಐಆರ್ ಪ್ರಕ್ರಿಯೆಗಾಗಿ ವಿವಿಧ ಸರ್ಕಾರಿ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿರುವುದರಿಂದ ಇಲಾಖೆಗಳ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು. ಇನ್ನು ಹತ್ತು ದಿನಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ಎಲ್ಲ ಸಿಬ್ಬಂದಿ ತಮ್ಮ ತಮ್ಮ ಇಲಾಖೆಗಳ ಕರ್ತವ್ಯಗಳಿಗೆ ಮರಳಲಿದ್ದಾರೆ ಎಂದು ಹೇಳಿದರು. ನಗರಸಭೆಯ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲು ನಿಕಟಪೂರ್ವ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸುವುದಾಗಿಯೂ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಯ ಬಗ್ಗೆಯೂ ಜಿಲ್ಲಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು. ಬೀದಿನಾಯಿಗಳ ಕಾಟಕ್ಕೆ ಸಂಬಂಧಿಸಿದಂತೆ ಪ್ರತಿದಿನ ಹಲವಾರು ದೂರುಗಳು ಬರುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಪ್ರಾಣಿದಯಾ ಸಂಘಟನೆಗಳಿಂದ ನಿರೀಕ್ಷಿತ ಸಹಕಾರ ದೊರೆಯುತ್ತಿಲ್ಲ ಎಂದು ತಿಳಿಸಿದರು.
ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವ ಕಾರ್ಯಕ್ರಮಕ್ಕೆ ಸಾಕಷ್ಟು ಅನುದಾನ ಲಭ್ಯವಿದ್ದರೂ, ನಾಯಿಗಳನ್ನು ಹಿಡಿಯಲು ಅಗತ್ಯ ಸಿಬ್ಬಂದಿ ದೊರೆಯುತ್ತಿಲ್ಲ. ಈ ಕಾರ್ಯಕ್ಕೆ ಸಿಬ್ಬಂದಿಗೆ ತರಬೇತಿ ನೀಡಲು ಜಿಲ್ಲಾಡಳಿತ ಸಿದ್ಧವಿದ್ದರೂ ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿರುವ ಪ್ರಾಣಿದಯಾ ಸಂಘಟನೆಗಳು ಸಲಹೆ ನೀಡುವುದಕ್ಕೆ ಸೀಮಿತವಾಗಿದ್ದು, ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡಲು ಮುಂದೆ ಬರುತ್ತಿಲ್ಲ. ಅಲ್ಲದೆ, ಈ ಕಾರ್ಯಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಜಿಲ್ಲೆಯ ಯಾವುದೇ ಪ್ರಾಣಿದಯಾ ಸಂಘಟನೆ ನೋಂದಾಯಿತವಾಗಿಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ನಗರಸಭೆಯ ಸಮಸ್ಯೆಗಳು ಹಾಗೂ ಬೀದಿನಾಯಿಗಳ ಹಾವಳಿ ಸೇರಿದಂತೆ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಕೈಗೊಳ್ಳುವ ಜನಪರ ಕಾರ್ಯಗಳಿಗೆ ಉಡುಪಿ ನಗರ ಬಿಜೆಪಿ, ನಿಕಟಪೂರ್ವ ನಗರಸಭಾ ಸದಸ್ಯರು ಹಾಗೂ ಶಾಸಕರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ನಿಯೋಗವು ಭರವಸೆ ನೀಡಿತು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿಯ ಪ್ರಮುಖರು ಹಾಗೂ ನಗರಸಭೆಯ ನಿಕಟಪೂರ್ವ ಸದಸ್ಯರು ಉಪಸ್ಥಿತರಿದ್ದರು.
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…
ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…
ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…
ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…