ಉಡುಪಿ : ಪಕ್ಷ ಸಂಘಟನೆಯಲ್ಲಿ ಎಲ್ಲರೂ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು : ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ -Vishwanews24

Featured, ಉಡುಪಿ

ಉಡುಪಿ : ಪಕ್ಷ ಸಂಘಟನೆಯಲ್ಲಿ ಎಲ್ಲರೂ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು : ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ -Vishwanews24

ಉಡುಪಿ: ಪಕ್ಷದ ಪ್ರತಿ ಚಟುವಟಿಕೆಗಳಲ್ಲಿ ಜಿಲ್ಲಾ ಸಮಿತಿಯೊಂದಿಗೆ ಪ್ರತಿ ಮಂಡಲ, ಮೋರ್ಚಾ, ಪ್ರಕೋಷ್ಠಗಳ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಪಕ್ಷ ಸಂಘಟನೆಯಲ್ಲಿ ಎಲ್ಲರೂ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಮಂಡಲಗಳ ಪ್ರಭಾರಿಗಳು, ಜಿಲ್ಲಾ ಮೋರ್ಚಾ ಮತ್ತು ಮಂಡಲಗಳ ಉಸ್ತುವಾರಿಗಳು, ಮೋರ್ಚಾ-ಪ್ರಕೋಷ್ಠಗಳ ಸಂಯೋಜಕರ ಯಾದಿ ಬಿಡುಗಡೆಗೊಳಿಸಿ ಮಾತನಾಡಿದರು.

ಪಕ್ಷದ ಅಧಿಕೃತ ಕಾರ್ಯಕ್ರಮ ಸಮಯದ ಇತಿಮಿತಿಯೊಳಗೆ ನಿರ್ವಹಿಸಿ, ಸಂಘಟನಾತ್ಮಕ ದೃಷ್ಟಿಯಿಂದ ವಿವಿಧ ಸ್ತರದ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದರ ಜೊತೆಗೆ ಮುಂಬರಲಿರುವ ಗ್ರಾಪಂ ಚುನಾವಣೆ ಭರ್ಜರಿ ಗೆಲುವಿನ ಗುರಿಯೊಂದಿಗೆ ಸಮರ್ಥವಾಗಿ ಎದುರಿಸಲು ಎಲ್ಲರೂ ಸಜ್ಜಾಗಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿ ಇಂದು ಸರ್ವಸ್ಪರ್ಶಿ ಸರ್ವವ್ಯಾಪಿ ರಾಜಕೀಯ ಪಕ್ಷವಾಗಿದೆ. ಪಕ್ಷದ ತತ್ವ ಸಿದ್ಧಾಂತ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಯ ಮೆಚ್ಚಿ ಅಸಂಖ್ಯಾತ ಕಾರ್ಯಕರ್ತರು ಬದ್ಧತೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕೇಂದ್ರ, ರಾಜ್ಯ ಸರಕಾರದ ವಿವಿಧ ಜನಪರ ಯೋಜನೆಗಳನ್ನು ಬೂತ್ ಮಟ್ಟಕ್ಕೆ ತಲುಪಿಸುವಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ಸತತ ಪ್ರಯತ್ನ, ಸಾಧನೆಯಿಂದ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ಸದ್ಯದಲ್ಲೇ ನಡೆಯಲಿರುವ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪರ ಇರುವ ಪೂರಕ ವಾತಾವರಣ ಸದುಪಯೋಗಗೊಳಿಸಿ ಎಲ್ಲಾ ಪಂಚಾಯತ್‍ಗಳಲ್ಲಿ ಅದ್ಬುತ ಗೆಲುವು ಸಾಧಿಸುವತ್ತ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮಂಡಲಗಳ ಅಧ್ಯಕ್ಷರು , ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು ಉಪಸ್ಥಿತರಿದ್ದರು.