ಉಡುಪಿ: ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ – vishwanews24
ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ
ಉಡುಪಿ: ಲಕ್ಷ್ಮೀ 2006ರಿಂದ ಕಣ್ಮರೆಯಾಗಿದ್ದು, ಆಕೆಯ ವಿರುದ್ಧ ಅಂದಿನ ಶಂಕರನಾರಾಯಣ (ಇಂದಿನ ಅಮಾಸೆಬೈಲು) ಠಾಣೆಯಲ್ಲಿ 2007ರಲ್ಲಿ ಗುಂಡಿನ ದಾಳಿ ನಡೆಸಿದ್ದು, ಹಲ್ಲೆ ಮಾಡಿ, ಬೆದರಿಕೆ ಹಾಕಿದ್ದು ಹಾಗೂ ಭಿತ್ತಿಪತ್ರ, ಕರಪತ್ರಗಳನ್ನು ಅಂಟಿಸಿದ ಒಟ್ಟು 3 ಪ್ರಕರಣಗಳು ದಾಖಲಾಗಿವೆ ಎಂದು ಅವರು ವಿಚಾರಣೆ ಬಾಕಿ ಇವೆ. ಆಕೆ ನೆಲೆಸಿರುವ ಆಂಧ್ರಪ್ರದೇಶದಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಡಾ| ಅರುಣ್ ತಿಳಿಸಿದ್ದಾರೆ.
ಶರಣಾಗತಿ ಪ್ರಕ್ರಿಯೆಯ ವೇಳೆ ಎಸ್ಪಿ ಡಾ| ಕೆ. ಅರುಣ್, ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ, ಎಎನ್ಎಫ್ ಇನ್ಸ್ಪೆಕ್ಟರ್ ಸತೀಶ್ ಕಾನೂನು ಪ್ರಕ್ರಿಯೆ ಪೂರೈಸಿದರು. ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ವೈದ್ಯಕೀಯ ಪರೀಕ್ಷೆ
ಶರಣಾಗತಿ ಪ್ರಕ್ರಿಯೆ ಬಳಿಕ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದ ಪೊಲೀಸ್ ತಂಡವು ಜಿಲ್ಲಾಸ್ಪತ್ರೆಯಲ್ಲಿ ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಫೆ. 3ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಧೀಶರು ತಿಳಿಸಿದರು.
ಸಮಸ್ಯೆ ಬಗ್ಗೆ ಗಮನ ಹರಿಸಲಾಗುವುದು: ಡಿ.ಸಿ.
ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ, ರಾಜ್ಯ ಸರಕಾರದ ಆದೇಶದಂತೆ ಶರಣಾಗತಿ ಪ್ಯಾಕೇಜ್ ನೀಡಲಾಗುತ್ತಿದೆ. 3 ಕೆಟಗರಿಯಲ್ಲಿ ನಕ್ಸಲ್ ಶರಣಾಗತಿ ಪ್ಯಾಕೇಜ್ ಇದೆ. ಈಕೆ ನಮ್ಮ ರಾಜ್ಯದವಳಾಗಿದ್ದರಿಂದ ಎ ಶಿಫಾರಸು ಮಾಡಿದ್ದೇವೆ. ಪುನರ್ವಸತಿ ಹಾಗೂ ಕೌಶಲ ತರಬೇತಿ, ಶಿಕ್ಷಣ ನಡೆಸಲು ಅವಕಾಶ ಇದೆ. ಲಕ್ಷ್ಮಿಯ ಊರಿನ ಮೂಲಸೌಕರ್ಯಗಳ ಬಗ್ಗೆ ಗಮನಹರಿಸಲಾಗುವುದು ಎಂದರು.
