ಉಪಚುನಾವಣೆ : 12ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ : ಪ್ರಲ್ಹಾದ ಜೋಶಿ -Vishwanews24
ಮಂಗಳೂರು: ಜಾಗತಿಕ ಆರ್ಥಿಕ ಹಿನ್ನಡೆ ಇರುವಾಗ ಸರ್ಕಾರವೇ ಬಂಡವಾಳ ಹೂಡಿಕೆ ಮಾಡುವುದು ಉತ್ತಮ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 100 ದಿನಗಳ ಸಾಧನೆ ಬಗ್ಗೆ ಅವರು ಸೋಮವಾರ ನಗರದ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಆಡಳಿತ ಮುಖ್ಯಸ್ಥ ಹಾಗೂ ರಾಜಕೀಯ ಮುಖ್ಯಸ್ಥರು ಬೇರೆ ಬೇರೆ ಇದ್ದರೆ, ನಮ್ಮ ಸರ್ಕಾರ ಹಾಗಿಲ್ಲ, ನಮ್ಮದು ಅತ್ಯಂತ ನಿರ್ಣಾಯಕವಾದ ಸರ್ಕಾರ ಎಂದರು.
ಮೂಲಸೌಕರ್ಯ ಅಭಿವೃದ್ಧಿ ಜತೆಗೆ ರೈಲ್ವೆ ಅಭಿವೃದ್ಧಿ, ವೇಗ ಸುಧಾರಣೆ ಉದ್ದೇಶದಿಂದ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು. 10 ವರ್ಷಗಳಲ್ಲಿ ಇದನ್ನು ವೆಚ್ಚ ಮಾಡುವ ಯೋಜನೆ ಇದೆ. ಈ ಹೂಡಿಕೆಗಳಿಂದಾಗಿ ಆರ್ಥಿಕತೆ ಚೇತರಿಕೆ ಪಡೆಯುವ ಸ್ಪಷ್ಟ ಸಾಧ್ಯತೆ ಇದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಜಿಡಿಪಿಯಲ್ಲಿ ಕುಸಿತವಾಗಿದ್ದರೂ ನಮ್ಮ ದೇಶ ಅಧಿಕ ವೇಗದಲ್ಲಿ ಪ್ರಗತಿಯಾಗುತ್ತಿದೆ ಎಂದು ಜೋಶಿ ಹೇಳಿದರು.
ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.12ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ. ಪ್ರಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೇಂದ್ರ ನಾಯಕರು ಸೂಚನೆ ನೀಡಲಿದ್ದಾರೆ. ಪೂರ್ಣಾವಧಿಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದರು.
ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಲೆಕ್ಕಪರಿಶೋಧಕ ಶಾಂತಾರಾಮ ಶೆಟ್ಟಿ, ಬಿಜೆಪಿ ಮುಖಂಡರಾದ ಪ್ರತಾಪ್ಸಿಂಹ ನಾಯಕ್ ಹಾಗೂ ಗೋಪಾಲಕೃಷ್ಣ ಹೇರಳೆ ಹಾಜರಿದ್ದರು.
