ಉಳ್ಳಾಲ : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ;  ಆರೋಪಿಗಳು 4 ದಿನ ಪೊಲೀಸ್‌ ಕಸ್ಟಡಿಗೆ – vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ : ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ;  ಆರೋಪಿಗಳು 4 ದಿನ ಪೊಲೀಸ್‌ ಕಸ್ಟಡಿಗೆ

ಉಳ್ಳಾಲ: ಮುನ್ನೂರು ಗ್ರಾಮದ ನೇತ್ರಾವತಿ ನದಿ ತಟದ ಬಂಗ್ಲೆ ಹೌಸ್‌ ಬಳಿ ಪಶ್ಚಿಮ ಬಂಗಾಲ ಮೂಲದ ಯುವತಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಸಂತ್ರಸ್ತೆ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಶನಿವಾರ ಯುವತಿಯನ್ನು ಅತ್ಯಾಚಾರ ಮಾಡಲಾಗಿದೆಯಾ ಎನ್ನುವ ವೈದ್ಯಕೀಯ ವರದಿ ಪೊಲೀಸರ ಕೈ ಸೇರಲಿದೆ. ಘಟನೆ ನಡೆದ 24 ಗಂಟೆಯೊಳಗೆ ರಿಕ್ಷಾ ಚಾಲಕ ಮೂಲ್ಕಿ ಮೂಲದ ಪ್ರಭುರಾಜ್‌, ಕುಂಪಲದ ಮಿಥುನ್‌ ಮತ್ತು ಪಡೀಲ್‌ನ ಮಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಸಂತ್ರಸ್ತ ಯುವತಿ 3-4 ತಿಂಗಳ ಹಿಂದೆ ಪ್ರಿಯತಮನ ಜತೆಗೆ ಊರು ಬಿಟ್ಟು ಆತನ ಜತೆಗೆ ಕೇರಳ ಕಡೆಗೆ ಕೆಲಸಕ್ಕೆ ಬಂದಿದ್ದಳು. ಎ. 17ರಂದು ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಪ್ರಿಯತಮ ಮೊಬೈಲನ್ನು ಒಡೆದು ಹಾಕಿ ಮನೆಯಿಂದ ಹೊರ ಹಾಕಿದ್ದ. ಇದರಿಂದ ನೊಂದ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು. ಮಂಗಳೂರಿನಲ್ಲಿ ಇಳಿದವಳಿಗೆ ಮೊಬೈಲ್‌ ರಿಪೇರಿ ವಿಚಾರದಲ್ಲಿ ರಿಕ್ಷಾ ಚಾಲಕ ಪ್ರಭುರಾಜ್‌ ಜತೆಗೆ ಮಾತನಾಡಿದ್ದು, ಹಣವಿಲ್ಲದ ಕಾರಣ ಊರಿಗೆ ತೆರಳಲು ಸಹಕರಿಸುವಂತೆ ಕೇಳಿಕೊಂಡಿದ್ದಳು.

ಅದನ್ನೇ ದುರ್ಬಳಕೆ ಮಾಡಿಕೊಂಡ ಪ್ರಭುರಾಜ್‌ ಆಕೆಯ ಮೊಬೈಲ್‌ ರಿಪೇರಿ ಮಾಡಿಸಿಕೊಟ್ಟು ಅನಂತರ ಪಶ್ಚಿಮ ಬಂಗಾಲದಲ್ಲಿರುವ ಯುವತಿಯ ಸಹೋದರಿಗೆ ಕರೆ ಮಾಡಿ ರೈಲು ಟಿಕೆಟ್‌ಗೆ 2 ಸಾವಿರ ರೂ. ಗೂಗಲ್‌ ಪೇ ಮಾಡಿಸಿಕೊಂಡಿದ್ದ. ಬಳಿಕ ಆತ ಪಶ್ಚಿಮ ಬಂಗಾಲದ ರೈಲು ತಡವಾಗಿದೆ ಎಂದು ನಂಬಿಸಿ 5-6 ಗಂಟೆಗಳ ಕಾಲ ರಿಕ್ಷಾದಲ್ಲೇ ತಿರುಗಿಸಿ ಮತ್ತು ಬರುವ ಪಾನೀಯ ಕುಡಿಸಿ ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply