ಎಪ್ರಿಲ್ 10ರಂದು ಕಾಪು ವೆಂಕಟರಮಣ ದೇಗುಲದಲ್ಲಿ ಸಹಸ್ರ ಕುಂಭಾಭಿಷೇಕ
ಕಾಪು : ಸಮಗ್ರವಾಗಿ ಜೀರ್ಣೋದ್ಧಾರಗೊಂಡು ಕಂಗೊಲಿಸುತ್ತಿರುವ ಕಾಪು ಪೇಟೆಯ ಕೊಂಕಣಿ ಮಠ ಶ್ರೀ ವೆಂಕಟರಮಣ ದೇವಾಸ್ಥಾನದಲ್ಲಿ ಪ್ರಥಮ ಪ್ರತಿಷ್ಠಾ ವರ್ದಂತಿಯ ಪ್ರಯುಕ್ತ ಸಾನ್ನಿಧ್ಯಾಭಿವೃದ್ಧಿಗಾಗಿ ಎಪ್ರಿಲ್ 10 ರಂದು ಸಹಸ್ರ ಕುಂಭಾಭಿಷೇಕ ನಡೆಯಲಿದೆ. ಕಾಶಿ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಅಮೃತಹಸ್ತದಿಂದ ಜರಗಲಿರುವ ಸಹಸ್ರ ಕುಂಭಾಭಿಷೇಕದ ಪ್ರಯುಕ್ತ ಎಪ್ರಿಲ್ 7 ರಿಂದ ಮೊದಲ್ಗೊಂಡು ಎಪ್ರಿಲ್ 10 ರ ವರೆಗೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿವೆ.

ಎಪ್ರಿಲ್ 7 ರಂದು ಸಂಜೆ 4.00 ಕ್ಕೆ ಕಾಪು ಶ್ರೀ ಹಳೇ ಮಾರಿಗುಡಿಯಿಂದ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಎಪ್ರೀಲ್ 8 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸ್ವ ಸಮಾಜದ ಪುರುಷ ಸದಸ್ಯರಿಂದ ಲಕ್ಷ ತುಳಸಿ ಅರ್ಚನೆ ನಡೆಯಲಿದೆ. ಎಪ್ರಿಲ್ 9 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸ್ವ ಸಮಾಜದ ಸುಮಂಗಲಿ ಮಹಿಳೆಯರಿಂದ ಶ್ರೀ ಲಕ್ಷ್ಮೀ ಸಹಸ್ರ ನಾಮದಿಂದ ಕುಂಕುಮಾರ್ಚನೆ ನಡೆಯಲಿದೆ. ಎಪ್ರಿಲ್ 10 ರಂದು ಬೆಳಗ್ಗೆ 4.30 ಕ್ಕೆ ಸರಿಯಾಗಿ ಕವಾಟೋದ್ಘಾಟನೆ ನಡೆದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ. ಬಳಿಕ ಕಾಶಿ ಮಠಾಧೀಶರನ್ನು ಸ್ವಾಗತಿಸಿಕೊಂಡು ,9.30 ರಿಂದ ಸ್ವಾಮೀಜಿಗಳ ಅಮೃತಹಸ್ತದಿಂದ ತಂತ್ರ ಸಾರೋಕ್ತ ಸಹಸ್ರ ಕುಂಭಾಭಿಷೇಕ ನಡೆಯಲಿದೆ. ತದನಂತರ ಮಹಾಪೂಜೆ , ಪ್ರಸಾದ ವಿತರಣೆ ಹಾಗೂ ಮಹಾ ಸಮಾರಾಧನೆ ಜರಗಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಆಡಳಿತ ಮಂಡಳಿ ಮತ್ತು ಕಾಪು ಪೇಟೆ ಹತ್ತು ಸಮಸ್ತರ ಪ್ರಕಟನೆ ತಿಳಿಸಿದೆ.

