ಏರ್ ಇಂಡಿಯಾ ವಿಮಾನಗಳಲ್ಲಿ ಇನ್ನು ಮುಂದೆ ಜೈ ಹಿಂದ್ ಘೋಷಣೆ – Vishwanews24
ನವದೆಹಲಿ: ಏರ್ ಇಂಡಿಯಾ ವಿಮಾನಗಳಲ್ಲಿ ಇನ್ನುಮುಂದೆ ಜೈಹಿಂದ್ ಎಂಬ ಘೋಷಣೆ ಕೇಳಿಬರಲಿದೆ. ವಿಮಾನ ಸಿಬ್ಬಂದಿ ತಕ್ಷಣವೇ ಜಾರಿಗೆ ಬರುವಂತೆ ಈ ಆದೇಶ ಪಾಲನೆ ಮಾಡಬೇಕು ಎಂದು ಏರ್ ಇಂಡಿಯಾ ಕಾರ್ಯಕಾರಿ ನಿರ್ದೇಶದ ಅಮಿತಾಬ್ ಸಿಂಗ್ ಸೂಚಿಸಿದ್ದಾರೆ.
ಜೈ ಹಿಂದ್ ಘೋಷಣೆಯಿಂದ ಪ್ರಯಾಣಿಕರಲ್ಲಿ ಉತ್ಸಾಹವೂ ಹೆಚ್ಚುತ್ತದೆ. ಅಲ್ಲದೆ ಸದ್ಯದ ರಾಷ್ಟ್ರದ ಜನರ ಮನಸ್ಥಿತಿ ದೇಶಕ್ಕಾಗಿ ತುಡಿಯುತ್ತಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾದ ಮಾಜಿ ಮುಖ್ಯಸ್ಥ ಅಶ್ವನಿ ಲೋಹಾನಿ 2016ರಲ್ಲಿ ಇದೇ ರೀತಿ ಆದೇಶ ಹೊರಡಿಸಿದ್ದರು. ವಿಮಾನ ವಿಳಂಬದ ಸಮಯದಲ್ಲಿ ಸಿಬ್ಬಂದಿ ಅನಾದರಣೀಯವಾಗಿ, ಕಾಳಜಿಯಿಲ್ಲದ ರೀತಿ ವರ್ತಿಸುತ್ತಾರೆ ಎಂದು 2016ರಲ್ಲಿ ಗ್ರಾಹಕರಿಂದ ದೂರು ಬರತೊಡಗಿತ್ತು. ಆಗ ಅಶ್ವನಿ ಈ ನಿರ್ಧಾರ ತೆಗೆದುಕೊಂಡಿದ್ದರು.
ವಿಮಾನ ಟೇಕ್ಆಫ್ ಆಗುವ ವೇಳೆ ಫ್ಲೈಟ್ ಕಮಾಂಡರ್ ಜೈ ಹಿಂದ್ ಎಂದು ಘೋಷಣೆ ಕೂಗಬೇಕು ಎಂದು ಹೇಳಿದ್ದರು. ಇದು ಅದ್ಭುತ ಪ್ರಭಾವ ಬೀರಿತ್ತು. ಪ್ರಯಾಣಿಕರು ಮತ್ತು ಏರ್ಲೈನ್ ಸಿಬ್ಬಂದಿ ಮಧ್ಯ ಉತ್ತಮ ಸೌಹಾರ್ದ ಮೂಡಿಸುವಲ್ಲಿ ಇದು ಸಹಕಾರಿಯಾಗಿತ್ತು.
ವಿಮಾನದ ಕ್ಯಾಪ್ಟನ್, ಸೇವಾ ಸಿಬ್ಬಂದಿಗಳು ಪ್ರಯಾಣಿಕರ ಜೊತೆ ಸದಾ ಪರಸ್ಪರ ಸಂಪರ್ಕ ಹೊಂದಿರಲೇಬೇಕಾಗಿರುತ್ತದೆ. ಪ್ರತಿ ಸೂಚನೆಯ ನಂತರ ಜೈ ಹಿಂದ್ ಹೇಳುವುದರಿಂದ ಉತ್ತಮ ವಾತಾವರಣ ವಿಮಾನದಲ್ಲಿ ಉಂಟಾಗುತ್ತದೆ. ಪ್ರಯಾಣಿಕರ, ವಿಮಾನ ಸಿಬ್ಬಂದಿಯ ನಡುವೆ ಬಂಧ ಏರ್ಪಡುತ್ತದೆ ಎಂದು ಏರ್ ಇಂಡಿಯಾ ಹೇಳಿದೆ.

