ಒಬ್ಬ ರೈತನ ಸಾಲಮನ್ನಾ ಆಗಿದ್ದರೂ ಈಗಲೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ : ಸಿಎಂ ವಿರುದ್ಧ ಬಳ್ಳಾರಿ ಕಿಂಗ್ ಶ್ರೀರಾಮುಲು ಗರಂ

Featured, ರಾಜ್ಯ ನ್ಯೂಸ್

ಕೊಪ್ಪಳ : ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕೆಂದು ಕೊಪ್ಪಳಕ್ಕೆ ಆಗಮಿಸಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಸರಕಾರದ ವಿರುದ್ಧ ಹರಿಹಾಯ್ದರು. ಅಲ್ಲದೆ, ಸಿಎಂ ಕುಮಾರಸ್ವಾಮಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಏಕವಚನದಿಂದಲೇ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಒಬ್ಬ ರೈತನ ಸಾಲ ಮನ್ನಾ ಆಗಿದ್ದರೂ ಈ ಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಸವಾಲು ಹಾಕಿದ್ದಾರೆ.

ಸಿಎಂ ಕುಮಾರಸ್ವಾಮಿ ಎಲ್ಲ ಕೆಲಸವನ್ನು ಕಾಟಾಚಾರಕ್ಕೆ ಮಾಡುತ್ತಾರೆ. ಅವರಿಗೆ ಅಧಿಕಾರ ಬೇಕೇ ಹೊರತು ಜನಸೇವೆಯಲ್ಲ. ಕೊಡಗಿನಲ್ಲಿ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದರೂ ತಡವಾಗಿ ನೆರೆಪೀಡಿತ ಪ್ರದೇಶಗಳಿಗೆ ಕಾಟಾಚಾರದ ಭೇಟಿ ನೀಡಿ ಒಂದೇ ಗಂಟೆಯಲ್ಲಿ ವಾಪಸಾಗುತ್ತಿದ್ದರು. ಮಾಧ್ಯಮಗಳು ಅವರನ್ನು ಒಂದು ದಿನ ಕೊಡಗಿನಲ್ಲಿ ಉಳಿಯುವಂತೆ ಮಾಡಿದವು. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡೇ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ, ಇವತ್ತಿನವರಿಗೆ ಬ್ಯಾಂಕ್​ಗಳಿಗೆ ಸಾಲ ಮನ್ನಾ ಮಾಡಿರುವ ಆದೇಶ ಪ್ರತಿಯನ್ನು ಬ್ಯಾಂಕ್​ಗಳಿಗೆ ಕೊಟ್ಟಿಲ್ಲ. ಏನೇ ಕೇಳಿದರೂ ಎಲ್ಲದಕ್ಕೂ ಕುಂಟುನೆಪ ಹೇಳುತ್ತಾರೆ.

ರಾಜ್ಯದಲ್ಲಿ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಆಗಿದೆ ಎಂದರೆ ಈ ಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಬಳಿಕ ಕೊಪ್ಪಳ ನಗರಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಇದೇ ವೇಳೆ ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಸಾರ್ವಜನಿಕ ಮೈದಾನದಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ನಗರದಲ್ಲೆಡೆ ವಾಜಪೇಯಿ ಭಾವಚಿತ್ರ ಮೆರವಣಿಗೆ ನಡೆಸಿ ಸ್ಮರಿಸಲಾಯಿತು.