ಒಮ್ಮೆ ಬನ್ನಿ ತುಳುನಾಡಿನ ಕಾರಣಿಕದ ಕ್ಷೇತ್ರ “ಶಿಬರೂರು ಕೊಡಮಣಿತ್ತಾಯ ದೈವಸ್ಥಾನ”ದ ಸನ್ನಿಧಾನಕ್ಕೆ…Vishwanews24

Featured, ವಿಶೇಷ ಲೇಖನಗಳು

ದೈವ ದೇವ ಮಂದಿರಗಳ ಪವಿತ್ರ ನೆಲೆವೀಡಾದ ದಕ್ಷಿಣ ಕನ್ನಡದಲ್ಲಿ ಪ್ರತಿ ಮಾಗಣೆಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ದುಷ್ಟರ ಶಿಕ್ಷೆಗೆ ಶಿಷ್ಟರ ರಕ್ಷಣೆಗಾಗಿ ದೈವ ಮಂದಿರಗಳಿವೆ. ಪ್ರಕೃತಿ ಸೌಂದರ್ಯದಿಂದ ಕಣ್ಮನ ಸೆಳೆಯುವ ಶಿಬರೂರಿನ ಶ್ರೀ ಕೊಡಮಣಿತ್ತಾಯ ದೈವಸ್ಥಾನವು ಐತಿಹಾಸಿಕ ಹಿನ್ನಲೆಯುಳ್ಳ ಪ್ರಾಚೀನ ದೈವಸ್ಥಾನಗಳಲ್ಲಿ ಒಂದಾಗಿದ್ದು ಸಾವಿರಾರು ಭಕ್ತಾದಿಗಳಿಗೆ ಮನಃ ಶಾಂತಿ ನೆಮ್ಮದಿಯನ್ನು ನೀಡುವ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಮಣಿದವರಿಗೆ ಕೊಡುಗೈಯ ಶಿಬರೂರು ಕೊಡಮಣಿತ್ತಾಯ ಎಂಬ ಮಾತು ಪ್ರತೀತಿಯಲ್ಲಿದ್ದು ವಿಷವೈದ್ಯನೆಂಬ ಅಭಿದಾನವನ್ನು ಪಡೆದಿದೆ.

ತುಳುವಿನಲ್ಲಿ ಒಂದು ಮಾತಿದೆ ‘ಅದು ತಿಗಲೆ ಇತ್ತಿನಾಯಗ್ ತಿಬಾರ್’ ಎಂಬುದು .. ತುಳುವಿನಲ್ಲಿ ಒಂದು ಮಾತಿದೆ ಅದು ತಿಗಲೆ ಇತ್ತಿನಾಯಗ್ ತಿಬಾರ್ ಎಂಬುದು ಯಾಕಂದರೆ ಶಿಬರೂರು ಅಂದರೆ ತಿಬಾರ್ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದಾರೆ, ಇಂತಹ ಜನ ಸಂದಣಿಯಲ್ಲಿ ಕ್ಷೇತ್ರಕ್ಕೆ ಬೇಟಿ ಕೊಡುದೆಂದರೆ ಅದೊಂದು ಸಾಹಸ ಎಂಬುದು ಹಿರಿಯರ ಮಾತು..

ದೈವ ಇಲ್ಲಿ ನೆಲೆಯೂರಿದ ಬಗ್ಗೆ..

ಒಂದು ಐತಿಹ್ಯದಂತೆ ದುರ್ಗಾ ಮತ್ತು ಈಶ್ವರ ದೇವರು ಗುಡ್ದಗಾಡಿನಲ್ಲಿ ತಿರುಗಾಡುತ್ತಿರುವಾಗ ದುರ್ಗೆಯಿಂದ ಅಗೋಚರವಾದ ಶಕ್ತಿಯೊಂದು ಉತ್ಪನ್ನವಾಯಿತು. ನಾಡಜನರು ತಿರುಗಾಡುತ್ತಿದ್ದ ಆ ಶಕ್ತಿಯನ್ನು ಮಂತ್ರವಾದಿಯ ನೆರವಿನಿಂದ ಕುಂಭದಲ್ಲಿ ಸ್ತಂಭನಗೊಳಿಸಿ ಮಹಾವೀರ ಗಂಗೆ ಎಂಬ ನದಿಯಲ್ಲಿ ತೇಲಿ ಬಿಟ್ಟ ಕುಂಭವು ಪೆರಿಂಜೆ ಎಂಬಲ್ಲಿ ಆಳುತ್ತಿದ್ದ ಜೈನ ಮನೆತನದವರಿಗೆ ದೊರೆಯಿತು. ಆ ಕುಂಭವನ್ನು ಇರುಳಿನಲ್ಲಿ ತೆರೆದಾಗ ಅದರಲ್ಲಿ ದೈವ ಪ್ರತ್ಯಕ್ಷವಾದುದರಿಂದ ಆ ದೈವವು ಕುಂಭಕಂಠಿಣಿ ಎಂಬ ಹೆಸರನ್ನು ಪಡೆಯಿತು.

ಸುಮಾರು 700 ವರ್ಷಗಳ ಹಿಂದೆ ದೈವ ಭಕ್ತನಾದ ತಿಬಾರ ಗುತ್ತಿನ (ಶಿಬರೂರುಗುತ್ತು) ತಿಮ್ಮ ತಿಕರಿವಾಳ್ ಹಾಗೂ ಎಕ್ಕಾರಿನ ದುಗ್ಗಣ್ಣಕಾವರು ದೈವ ದರ್ಶನಕ್ಕಾಗಿ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಇರುವೈಲಿಗೆ ಬಂದರು. ಅಲ್ಲಿ ಹರಿಕೆ ಹಾಕಿ ಗಂಧ ಪ್ರಸಾದ ಸ್ವೀಕರಿಸಿ ಹಿಂದಿರುಗಿ ಬರುವಾಗ ಧರ್ಮಾತ್ಮನಾದ ತಿಮ್ಮತಿಕರಿವಾಳ್ ನನ್ನು ಅನುಸರಿಸಿ ದೈವಗಳು ತಿಬಾರಗುತ್ತು (ಶಿಬರೂರು) ಮನೆಗೆ ಬಂದವು. ಮಠದ ಗುಡ್ಡೆಯಲ್ಲಿ ಸ್ಥಾನ ಕಟ್ಟಿಸಿ ಧ್ವಜಾರೋಹಣ ಮಾಡಿಸಿ ಬಂಡಿ ಎಳೆಸಿ ಧರ್ಮದೈವಗಳಿಗೆ ಉತ್ಸವ ನಡೆಸಿದರು. ಪ್ರಕೃತಿ-ಪುರುಷ ಎರಡು ಸತ್ವ ಸಮ್ಮಳಿತವಾಗಿ ರಾಜನ್ ದೈವವಾಗಿಯೂ ಮಾಡ ವೈದಿಕ ವಿದ್ಯಾಸಂಪನ್ನರಾದ ವಿದ್ವಾಂಸರ ಕೇಂದ್ರವಾಗಿದ್ದು ಪ್ರಶಾಂತ ತಪೋವನವು ನದೀ ತೀರದ ಪಕ್ಕದಲ್ಲಿ ಕೊದಮಣಿತ್ತಾಯ ಶಿಬರೂರಿನಲ್ಲಿ ಮೆರೆದಾಡುತ್ತಿದೆ.

ದೈವಭಕ್ತನಾದ ತಿಬಾರ(ಶಿಬರೂರು) ಗುತ್ತಿನ ತಿಮ್ಮತಿ ಕರಿವಾಳ್ ಹಾಗೂ ಎಕ್ಕಾರಿನ ದುಗ್ಗಣ್ಣಕಾವರು ಇರುವೈಲ್ ಶ್ರೀ ದುರ್ಗಾಪರಮೇಶ್ವರೀ ದೇವರ ದರ್ಶನ ಪಡೆದು , ’ಪೊಸದೈವ’ ಕೊಡಮಣಿತ್ತಾಯನಿಗೆ ಹರಕೆ ಸಲ್ಲಿಸಲು ಕೆಳಬರ್ಕೆಗೆ ಬರುತ್ತಾರೆ. ಅಲ್ಲಿ ಹರಕೆ ಹಾಕಿ ಗಂಧಪ್ರಸಾದ ಸ್ವೀಕರಿಸಿ, ಬಾಯಾರಿಕೆ ಸ್ವೀಕರಿಸಿ, ಇನ್ನು ತಮ್ಮ ಊರಿಗೆ ಹೊರಡುತ್ತಾರೆ. ಆಗ ಕೆಳಬರ್ಕೆಯವರು ಅವರಿಗೆ ಒಂದೊಂದು ಎತ್ತು ಮತ್ತು ಕೋಳಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಉಡುಗೊರೆಗಳನ್ನು ಹಿಡಿದುಕೊಂಡು ಇಬ್ಬರಿಗೆ ನಡೆದು ಬರುವಾಗ ದಾರಿಮಧ್ಯೆ ಬಾಯಾರಿಕೆಯಾಗುತ್ತದೆ. ಎತ್ತು ಮತ್ತು ಕೋಳಿಗಳನ್ನು ಸಮೀಪದ ಅಶ್ವತ್ಥ ಮರಕ್ಕೆ ಕಟ್ಟಿ ಹಾಕಿ ಸಮೀಪವಿರುವ ನಡ್ಡೋಡಿಗುತ್ತುವಿಗೆ ಹೋಗುತ್ತಾರೆ. ಅಲ್ಲಿ ಬಾಯಾರಿಕೆ, ಆಯಾಸ ಪರಿಹರಿಸಿ ಪ್ರಯಾಣ ಮುಂದುವರಿಸಲು ಅಶ್ವತ್ಥ ಮರದಡಿಗೆ ಬರುವಾಗ ಎತ್ತುಗಳಿಗೆ ಆವೇಶ ಬಂದಿರುತ್ತದೆ. ಇದೇನೆಂದು ಆಶ್ಚರ್ಯದಿಂದ ಮತ್ತೆ ಎತ್ತು ಮತ್ತು ಕೋಳಿಗಳನ್ನು ತಮ್ಮೋರಿಗೆ ಕರೆದುಕೊಂಡು ಹೋಗುತ್ತಾರೆ. ತಾಂಗಡಿ ಬರ್ಕೆಗೆ ಬಂದ ದುಗ್ಗಣ್ಣಕಾವೇರರು ಎತ್ತಿನ ಆವೇಶಕ್ಕೆ ಕಾರಣವೇನೆಂದು ಕೇಳಲು ಬಲ್ಯಾಯರು ರಾಜನ್ ದೈವಗಳಾದ ಒರಿ ಉಲ್ಲಾಯ ಮತ್ತು ಧರ್ಮಧೈವ ಕೊಡಮಣಿತ್ತಾಯಗಳು ನಿಮ್ಮಲ್ಲಿಗೆ ಬಂದಿದ್ದಾರೆ ಅವುಗಳನ್ನು ಪ್ರತಿಷ್ಠಾಪಿಸಬೇಕೆಂದು ಹೇಳುತ್ತಾರೆ. ಅವರ ಮಾತಿನಂತೆ ದೇರಿಂಜಗಿರಿ(ಎಕ್ಕಾರು ಸ್ಥಾನ) ಗುಡಿಕಟ್ಟಿಸಿ ಆರಾಧಿಸುತ್ತಾರೆ. ಇತ್ತ ತಿಬಾರಗುತ್ತಿನ ತಿಮ್ಮತ್ತಿ ಕರಿವಾಳರು ತನಗೆ ಕೊಟ್ಟ ಉಡುಗೊರೆಯನ್ನು ಹಿಡಿದುಕೊಂಡು ತಿಬಾರಗುತ್ತಿಗೆ ಬರುತ್ತಾರೆ. ರಾತ್ರಿ ಮಲಗಿರುವಾಗ ದನದ ಕೊಟ್ಟಿಗೆಯಲ್ಲಿ ಗೋವುಗಳ ಕಿರುಚಾಟ ಕೇಳಿಸುತ್ತದೆ. ಆಗ ಅವರಿಗೆ ಹಿಂದಿನ ದಿವಸದ ಎತ್ತಿನ ಆವೇಶದ ನೆನಪಾಗಿ ಮರುದಿವಸ ಬಲ್ಯಾಯರಲ್ಲಿ ಪ್ರಶ್ನೆ ಕೇಳುತ್ತಾರೆ. ಆಗ ಅವರಿಗೆ ಉಲ್ಲಾಯ ಮತ್ತು ಧರ್ಮದೈವಗಳು ಬಂದ ವಿಚಾರ ಅರುವುತ್ತಾರೆ. ಆಗ ಅವರು ಸಂತೋಷದಿಂದ ದೈವಗಳಿಗೆ ದೈವಸ್ಥಾನ ಕಟ್ಟಿಸಲು ನಿರ್ಧರಿಸುತ್ತಾರೆ. ಅದಕ್ಕಾಗಿ ಕೆಸರುಕಲ್ಲು ಹಾಕಲು ಧರ್ಮಾತ್ಮ ವಿಷವೈದ್ಯರಾದ ಸೂರಿಂಜೆಗುತ್ತು ತ್ಯಾಂಪ ಶೆಟ್ರಲ್ಲಿ ಹೇಳುತ್ತಾರೆ. ತ್ಯಾಂಪ ಶೆಟ್ರು ತನಗೊದಗಿದ ಪುಣ್ಯಕಾರ್ಯವನ್ನು ನೆನೆದು ಆನಂದದಿಂದ ಒಪ್ಪಿ, ಆ ಕಾರ್ಯವನ್ನು ನಡೆಸಿ ಕೊಡುತ್ತಾರೆ. ನಂತರ ತಿಬಾರಗುತ್ತಿನಲ್ಲಿ ಗುಡಿನಿರ್ಮಾಣವಾಗುತ್ತದೆ. ಅಂದಿನಿಂದ ಇಂದಿನವರೆಗೂ ಅದೇ ಉತ್ಸಾಹದಿಂದ ಜಾತ್ರಾ ಮಹೋತ್ಸವ ನಡೆಯುತ್ತದೆ.

ವೈಕುಂಠ ಏಕಾದಶಿ, ಮೋಕ್ಷಕ್ಕಾಗಿ ಪ್ರಾರ್ಥಿಸುವ ದಿನ: ದೇಗುಲಗಳ ವಿಶೇಷ ಇಂತಹ ಜನ ಸಂದಣಿಯಲ್ಲಿ ಕ್ಷೇತ್ರಕ್ಕೆ ಭೇಟಿ ಕೊಡುವುದೆಂದರೆ ಅದೊಂದು ಸಾಹಸ ಎಂಬುದು ಹಿರಿಯರ ಮಾತು. ಶಿಬರೂರುಗುತ್ತು ತಿಮತ್ತಿಕರಿಯಾಲ್ ರವರ ಭಕ್ತಿಗೆ ಒಲಿದ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಕೋಳಿ ಮತ್ತು ಹೋರಿ ಮೂಲಕ ಶಿಬರೂರಿಗೆ ಬಂದು ನೆಲೆ ನಿಂತಿದೆ ಎಂಬ ಪ್ರತೀತಿ ಇದೆ.

ಬೆಳ್ಳಿಯ ಹರಕೆ ಅರ್ಪಣೆ :ನಂದಿನಿ ನದಿಯ ತಟದಲ್ಲಿ ನೆಲೆ ನಿಂತಿರುವ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವ ತುಳುನಾಡಿನಲ್ಲಿ ಕಾರಣಿಕದ ದೈವ ಎಂಬ ಪ್ರಸಿದ್ದಿಯನ್ನು ಪಡೆದಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಯಾಗಿ ಉಳ್ಲಾಯ ಮತ್ತು ಕೊಡಮಣಿತ್ತಾಯ ದೈವಕ್ಕೆ ಬೆಳ್ಳಿಯ ಹರಕೆಯನ್ನು ಅರ್ಪಿಸುತ್ತಾರೆ. ದೈವಸ್ಥಾನದಲ್ಲಿ ಪ್ರತಿವರ್ಷ ಧನು ಸಂಕ್ರಮಣಕ್ಕೆ ಧ್ವಜಾರೋಹಣವಾಗಿ ಮಹೋತ್ಸವವು ಜರಗುತ್ತದೆ. ಮರುದಿನ ಮುಂಜಾನೆ ಶ್ರೀ ಉಳ್ಳಾಯ ದೈವದ ನೇಮದಲ್ಲಿ ತುಲಾಭಾರ ಸೇವೆ, ಕಂಚೀಲು ಸೇವೆ, ಉರುಳು ಸೇವೆಗಳು ನಡೆಯುವುದಲ್ಲದೇ ಮಹಾ ಅನ್ನಸಂತರ್ಪಣೆಯು ನಡೆಯುತ್ತದೆ.

ಸಾವಿರಾರು ಭಕ್ತರ ಆಗಮನ :ಅದೇ ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಬಂಡಿ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯೂರು ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣದಿಂದ ಧ್ವಜಾವರೋಹರಣದವರೆಗೆ ಪ್ರತಿನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಈ ದಿನಗಳಲ್ಲಿ ಮಾತ್ರವಲ್ಲದೆ ಪ್ರತೀ ಸಂಕ್ರಮಣಕ್ಕೂ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಶ್ರೀ ದೈವದ ಕೃಪೆಗೆ ಪಾತ್ರರಾಗುತ್ತಾರೆ.

ಕಟೀಲು ದುರ್ಗೆ ಮತ್ತು ಕೊಡಮಣಿತ್ತಾಯ ದೈವದ ಅಮೋಘ ಭೇಟಿ..

ಈ ದೈವಸ್ಥಾನದಲ್ಲಿ ಪ್ರತಿವರ್ಷ ಧನು ಸಂಕ್ರಮಣಕ್ಕೆ ಧ್ವಜಾರೋಹಣವಾಗಿ ಮಹೋತ್ಸವವು ಜರಗುತ್ತದೆ. ಮರುದಿನ ಮುಂಜಾನೆ ಶ್ರೀ ಉಳ್ಳಾಯ ದೈವದ ನೇಮದಲ್ಲಿ ತುಲಾಭಾರ ಸೇವೆ, ಕಂಚೀಲು ಸೇವೆ, ಉರುಳು ಸೇವೆಗಳು ನಡೆಯುವುದಲ್ಲದೇ ಮಹಾ ಅನ್ನಸಂತರ್ಪಣೆಯು ನಡೆಯುತ್ತಿದೆ. ಅದೇ ರಾತ್ರಿ ಕೊಡಮಣಿತ್ತಾಯ ದೈವದ ನೇಮ, ಬಂಡೀ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯೂರು ಧೂಮಾವತಿ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣದಿಂದ ಧ್ವಜಾವರೋಹರಣದವರೆಗೆ ಪ್ರತಿನಿತ್ಯ ಅನ್ನಸಂತರ್ಪಣೆ ಜರಗಲಿದೆ.ಶ್ರೀಕ್ಷೇತ್ರ ಕಟೀಲಿಗೂ ಶಿಬರೂರಿ(ತಿಬಾರ್)ನ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅಭೇದ್ಯ ಸಂಬಂಧವಿದೆ. ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಕಟೀಲಿಗೆ ಭೇಟಿ ಮಾಡುವಂತಹ ಒಂದು ಸಂಪ್ರದಾಯವಿದೆ. ಇದು ತುಂಬಾ ನಯನಮನೋಹರವಾಗಿರುತ್ತದೆ.


ಸರ್ವರೋಗ ನಿವಾರಿಸುವ ತೀರ್ಥಭಾವಿ..:ವಿಷವೈದವನ್ನು ಇನ್ನು ಮುಂದವರಿಸುವ ಸರಿಯಾದ ಜನ ತನ್ನ ಮುಂದಿಲ್ಲವೆಂದು ತಿಳಿದು ತನ್ನ ಗಿಣಿಚಿರಾವಿಯಲ್ಲಿದ್ದ ವಿಷ ಹೀರುವ ಕಲ್ಲನ್ನು ದೈವಗಳನ್ನು ನೆನೆಸಿ ’ ಇನ್ನು ಮುಂದೆ ಈ ಬಾವಿಯ ನೀರು ಮತ್ತು ದೈವ ಗಂಧವೇ ವಿಷಕ್ಕೆ ಮದ್ದಾಗಲಿ’ ಎಂದು ಹೇಳಿ ತಿಬಾರಗುತ್ತಿನ ಬಾವಿಗೆ ಹಾಕುತ್ತಾರೆ. ಇದರಿಂದ ಕೊಡಮಣಿತ್ತಾಯ ದೈವಕ್ಕೆ ‘ವೈದ್ಯನಾಥ’ನೆಂಬ ಅಭಿದಾನ ಪ್ರಾಪ್ತವಾಯಿತು. ಕಾರಣಿಕ ಸ್ಥಳ ಶಿಬರೂರಿನ ತೀರ್ಥದ ಬಾವಿಯಲ್ಲಿ ಸಿಗುವ ತೀರ್ಥವನ್ನು, ದೈವದ ಗಂಧಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ ವಿಷನಾಶವಾಗುತ್ತದೆ ಎಂಬ ನಂಬಿಕೆ. ಅಷ್ಟು ಮಾತ್ರವಲ್ಲದೆ ಬಾವಿಯ ತೀರ್ಥ ಮತ್ತು ದೈವದ ಗಂಧಪ್ರಸಾದ ಸ್ವೀಕರಿಸುವವರಿಗೆ ನಾಗದೋಷ ನಿವಾರಕ, ಚರ್ಮವ್ಯಾನಾಶಕ, ಉಬ್ಬಸ ರೋಗ ದೂರಿಕರಿಸುವ ಶಕ್ತಿಯಲ್ಲದೆ, ಸಂತಾನ ಪ್ರತಿಬಂಧಕ ದೋಷವೂ ಪರಿಹಾರವಾಗುವುದು. ವಿಷಜಂತು ಕಚ್ಚಿದ ಅನೇಕ ಜನರನ್ನು ರಕ್ಷಿಸಿದ ಜ್ವಲಂತ ಉದಾಹರಣೆಗಳು ಪರಿಸರದಲ್ಲಿ ಕಾಣುತ್ತಿವೆ. ಈ ಬಾವಿಯ ನೀರನ್ನು ಏತದಿಂದಲೇ ಮೇಲಕ್ಕೆತ್ತುತ್ತಾರೆ. ವರ್ಷಾವ ನೇಮದ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಈ ಪವಿತ್ರ ತೀರ್ಥ ಸ್ವೀಕರಿಸುತ್ತಾರೆ..

ನಾಗನ ಸಹಿತವಾಗಿ ಒಂದು ವಿಶೇಷವಾದ ಸಾನಿಧ್ಯ ಶಿಬರೂರಲ್ಲಿದೆ. ಇವತ್ತು ಅಲ್ಲಿಯ ತೀರ್ಥವನ್ನು ಸ್ವೀಕರಿಸಿದರೆ ಯಾವುದೇ ಸರ್ಪಗಳ ವಿಷ ಪರಿಹಾರ ಆಗುತ್ತದೆಂದು ಪ್ರತ್ಯಕ್ಷ ನಿದರ್ಶನ ಇದೆ. ಅಲ್ಲಿಯ ತೀರ್ಥ ಬಾವಿಯ ಪಾವಿತ್ರ್ಯವನ್ನು ಇವತ್ತಿನವರೆಗೂ ಕಾಪಾಡಿಕೊಂಡು ಬಂದಿರುವುದು ಅಲ್ಲಿಯ ಕ್ಷೇತ್ರದ ಬಗೆಗಿರುವ ಕಾಳಜಿ ಪ್ರಶಂಸನೀಯ. ಶಿಬರೂರಿನ ಕೊಡಮಣಿತ್ತಾಯನಿಗೂ ಶಿಬರಾಯರ ಮನೆತನಕ್ಕೂ ಅನಾದಿಯಿಂದಲೂ ಅವಿಚ್ಛಿನ್ನವಾದ ಸಂಬಂಧವಿದೆ. ಶಿಬರೂರು ಕ್ಷೇತ್ರದ ಪಕ್ಕದಲ್ಲೇ ಪುಣ್ಯ ನದಿ ನಂದಿನಿಯೂ ಹರಿಯುತ್ತದೆ. ಮಿಜಾರಿನ ಕನಕಗಿರಿಯಲ್ಲಿ ಹುಟ್ಟಿ ಕಟೀಲು, ಶಿಬರೂರು, ಪಾವಂಜೆ ಕ್ಷೇತ್ರಗಳನ್ನು ದಾಟಿ ಕಡಲನ್ನು ಸೇರುತ್ತದೆ. ಕೊಡೆತ್ತೂರು ಮತ್ತು ಅತ್ತೂರು ನೆರಕರೆಯ ಊರುಗಳಾಗಿದ್ದು ಅಲ್ಲಿಯ ಊರದೈವವಾದ ಶ್ರೀ ಅರಸು ಕುಂಜರಾಯನ ವರ್ಷಾವಧಿ ಜಾತ್ರೆಯ ಸಂದರ್ಭ ಶ್ರೀ ಶಿಬರೂರ ಕೊಡಮಣಿತ್ತಾಯನ ಭಂಡಾರ ಬಂದು ಅಲ್ಲಿ ಶ್ರೀ ದೈವಕ್ಕೂ ಕೂಡಾ ನೇಮ ನಡೆಯುತ್ತದೆ.

ಮಂಗಳೂರಿನ ಸುಮಾರು 25 ಕಿ,ಮೀ ದೂರದಲ್ಲಿ ಶಿಬರೂರು ಕ್ಷೇತ್ರವಿದೆ. ಪ್ರಸಿದ್ಧ ಕಟೀಲು ಕ್ಷೇತ್ರದಿಂದ ಶಿಬರೂರಿಗೆ 2 ಕಿ.ಮೀ ದೂರವಿದೆ. ಸುರತ್ಕಲ್ಲಿನಿಂದ ಕಾಟಿಪಳ್ಳಕ್ಕಾಗಿ ಸೂರಿಂಜೆಯ ಮೂಲಕ ಶಿಬರೂರನ್ನು ತಲುಪಬಹುದು. ಪ್ರಕೃತ ಶಿವರೂರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ಮೂಲಕ ಕಿನ್ನಿಗೋಳಿಯಿಂದ ಕೇವಲ 3 ಕಿ.ಮೀ ದೂರವಿರುತ್ತದೆ.