ಕರಾವಳಿಯಲ್ಲಿ ಕ್ಯಾರ್ ಚಂಡಮಾರುತ , ಕಡಲ ತೀರದಲ್ಲಿ ಹೆಚ್ಚಾದ ಅಲೆಗಳ ಅಬ್ಬರ -Vishwanews24
ಮಂಗಳೂರು: ಕ್ಯಾರ್ ಚಂಡಮಾರುತ ಪರಿಣಾಮ, ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡು ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಸುರಿದ ಭಾರಿ ಗಾಳಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಅರಬ್ಬಿ ಸಮುದ್ರದಲ್ಲಿ ನಿರ್ಮಾಣವಾಗಿದ್ದ ವಾಯುಭಾರ ಕುಸಿತ ಶುಕ್ರವಾರ ಮುಂಜಾನೆ 5.30ರ ವೇಳೆಗೆ ಚಂಡಮಾರುತವಾಗಿ ಪರಿತರ್ವನೆಗೊಂಡು ಉತ್ತರಕ್ಕೆ ಸಂಚರಿಸಿದೆ. ಮಧ್ಯಾಹ್ನ 2.30ರ ವೇಳೆಗೆ 16.2ಡಿಗ್ರಿ ಉತ್ತರ ಅಕ್ಷಾಂಶ ಮತ್ತು 71.7ಡಿಗ್ರಿ ಪೂರ್ವ ರೇಖಾಂಶದಲ್ಲಿ ಪೂರ್ವ ಮಧ್ಯ ಸಮುದ್ರಲ್ಲಿ ಕೇಂದೀಕೃತವಾಗಿತ್ತು. ಪ್ರಸ್ತತ ಒಮಾನ್ ತೀರದಿಂದ 1880 ಕಿ.ಮೀ.ದೂರದಲ್ಲಿದ್ದು, ಪ್ರತಿ ಕ್ಷಣಕ್ಕೂ ತೀವ್ರಗೊಳ್ಳುತ್ತಿದ್ದು, 12 ಗಂಟೆಯಲ್ಲಿ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ. ಪೂರ್ವ ಕೇಂದ್ರ ಅರಬ್ಬಿ ಸಮುದ್ರದಿಂದ ಪಶ್ಚಿಮ ಮತ್ತು ವಾಯವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆ ಇರುವುದರಿಂದ ಭಾರತ ಕರಾವಳಿಯಿಂದ ಮಾರುತ ದೂರ ಸಾಗಲಿದೆ ಎಂದು ಹವಾಮಾನ ಇಲಾಖೆ ಮತ್ತು ಸಮುದ್ರ ಅಧ್ಯಯನ ಸಂಸ್ಥೆ ಐಎನ್‌ಸಿಒಐಎಸ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವಾಸಿಗರನ್ನು ಸಮುದ್ರಕ್ಕೆ ಇಳಿದಂತೆ ತಡೆಯಲು ಜಿಲ್ಲಾಡಳಿತ ಪೊಲೀಸ್ ಹಾಗೂ ಹೋಮ್‌ಗಾರ್ಡ್ ಕಿನಾರೆಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಹೆಚ್ಚಿನ ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ. ನವ ಮಂಗಳೂರು ಬಂದರು ಪ್ರವೇಶಿಸುವ ಬಾಗಿಲಿನಲ್ಲಿ 200ಕ್ಕೂ ಅಧಿಕ ಬೋಟ್‌ಗಳು ನಿಂತಿರುವುದು ಕೋಸ್ಟ್‌ಗಾರ್ಡ್ ನೌಕೆಗಳು ಸಮುದ್ರದಲ್ಲಿ ರಕ್ಷಣೆ ಹಾಗೂ ಹುಡುಕಾಟ ಕಾರ್ಯಾಚರಣೆಗೆ ತೆರಳಲು ಅಡಚಣೆಯಾಗಿದೆ. ಬೋಟ್‌ಗಳನ್ನು ಬಂದರ್‌ನಲ್ಲಿ ಲಂಗರು ಹಾಕಿಸಲು ಪ್ರಯತ್ನ ನಡೆದಿದೆ.
ಚಂಡಮಾರುತ ಪರಿಣಾಮ ಸಮುದ್ರ ಇನ್ನೂ ಕೆಲವು ದಿನ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಅ.31ರವರೆಗೆ ಮಿನುಗಾರರು ಸಮುದ್ರಕ್ಕೆ ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. 45-55 ಕಿ.ಮೀ.ನಿದ 65 ಕಿ.ಮೀ. ವೇಗದಲ್ಲಿ ಸಮುದ್ರದಿಂದ ಬಲವಾದ ಗಾಳಿ ಬೀಸಲಿದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
