ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಎಳೆಯ ಹಸುವಿನ ಕರುಗಳ ರಕ್ಷಣೆ..

Featured, ಜಿಲ್ಲೆ

ಚನ್ನರಾಯಪಟ್ಟಣ: ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಎಳೆಯ ಕರುಗಳನ್ನು ಪ್ರಾಣಿ ದಯಾ ಸಂಘದ ಸದಸ್ಯರು ರಕ್ಷಿಸಿದ್ದಾರೆ. ಚನ್ನರಾಯಪಟ್ಟಣದ ಕಡೆಯಿಂದ ಪಟ್ಟಣದ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಲಾರಿಯನ್ನು ಸಂಘದ ಸದಸ್ಯರು ತಪಾಸಣೆ ಮಾಡಿದಾಗ 44 ಹಸುವಿನ ಕರುಗಳು ಪತ್ತೆಯಾಗಿದ್ದು, ಇವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದಾಗಿ ತಿಳಿದು ಬಂದಿದೆ.

ತಾಲೂಕಿನಲ್ಲಿ ಹೈನುಗಾರಿಕೆ ಮಾಡುತ್ತಿರುವವರು ತಮ್ಮ ಸೀಮೆಹಸುಗಳಿಗೆ ಗಂಡು ಕರುಗಳು ಜನಿಸಿದರೆ ತಕ್ಷಣ ಕಡಿಮೆ ಹಣಕ್ಕೆ ಕಸಾಯಿಖಾನೆಯವರಿಗೆ ಮಾರಾಟ ಮಾಡಿ ಬಿಡುತ್ತಾರೆ. ಕರುಗಳು ಹುಟ್ಟಿದ ಒಂದು ದಿನಗಳಿಂದ ಐದು ದಿನಗಳ ಕರುಗಳನ್ನು ತುಂಬಿಕೊಂಡ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದ ಪ್ರಾಣಿ ದಯಾ ಸಂಘದ ಗೌತಮ್ ಎಂಬುವವರು ಪಟ್ಟಣದ ಅಂಚೆ ಕಚೇರಿ ಮುಂಭಾಗದಲ್ಲಿ ವಾಹನವನ್ನು ತಡೆದು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಕರುಗಳನ್ನು ತುಂಬಿದ್ದ ವಾಹನ ಮತ್ತು ಚಾಲಕ ವಿಶ್ವ ಮತ್ತು ಸಹಾಯಕ ಯೋಗೇಶ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಪುಟ್ಟ ಕರುಗಳು ನಿತ್ರಾಣಗೊಂಡು ಕುಸಿದು ಬಿದ್ದು ನರಳುವುದನ್ನು ಕಂಡು ಮರುಗಿದ ಪಟ್ಟಣ ಪೊಲೀಸ್ ಠಾಣೆ ಉಪ ನಿರೀಕ್ಷಕ ಎಚ್.ಎಸ್.ವೆಂಕಟೇಶ್ ಡೈರಿಯಿಂದ ಹಾಲನ್ನು ತಂದು ಬಾಟಲ್‍ನಿಂದ ಮಕ್ಕಳಿಗೆ ಹಾಲು ಕುಡಿಸುವ ರೀತಿ ಸಂತೈಸಿದರು. ಜೊತೆಗೆ ಸಣ್ಣಪುಟ್ಟ ಗಾಯಗೊಂಡಿದ್ದ ಕರುಗಳಿಗೆ ಔಷಧಿ ನೀಡಿ ಉಪಚಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.