ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಕ್ಷಕ್ಕೆ ಹೊಸ ಶಕ್ತಿ, ಹುಮ್ಮಸ್ಸನ್ನು ತುಂಬಿದ್ದಾರೆ : ಸೋನಿಯಾ ಗಾಂಧಿ – Vishwanews24

Featured

ಹೊಸದಿಲ್ಲಿ : ಸೋನಿಯಾ ಗಾಂಧಿ ಅವರಿಂದು ಬುಧವಾರ ಕಾಂಗ್ರೆಸ್‌ ಸಂಸದೀಯ ಪಕ್ಷದ ಮಹಾ ಸಭೆಯಲ್ಲಿ ಮಾತನಾಡುತ್ತಾ, ‘ಆಳುವ ಮೋದಿ ಸರಕಾರದ ಆಡಳಿತ ತತ್ವವೇನೆಂದರೆ ಬಲಿಷ್ಠನೆಂದು ತೋರ್ಪಡಿಸಿಕೊಳ್ಳುವುದು, ಮಾತಿನ ಅರಮನೆ ಕಟ್ಟುವುದು ಮತ್ತು ಎದುರಾಳಿಗಳಿಗೆ ಬೆದರಿಕೆ ಒಡ್ಡುವುದೇ ಆಗಿದೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಪಕ್ಷ ತನ್ನ ರಾಜಕೀಯ ವಿರೋಧಿಗಳನ್ನು ಪೂರ್ಣ ಶಕ್ತಿಯೊಂದಿಗೆ ಹಣಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೋನಿಯಾ ಹೇಳಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪಕ್ಷಕ್ಕೆ ಹೊಸ ಶಕ್ತಿ, ಹುಮ್ಮಸ್ಸನ್ನು ತುಂಬಿದ್ದಾರೆ; ಅನುಭವ ಮತ್ತು ಯುವ ಶಕ್ತಿಯನ್ನು ಒಗ್ಗೂಡಿಸಿ ಪಕ್ಷವನ್ನು ಪುನರ್‌ ಸಂಘಟಿಸಿದ್ದಾರೆ ಎಂದು ಹೇಳಿದ ಸೋನಿಯಾ, ರಾಹುಲ್‌ ಅವರ ಸಂಘಟನಾ ಚಾತುರ್ಯವನ್ನು ಪ್ರಶಂಸಿಸಿದರು.

ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ನಾವು ಸಾಧಿಸಿರುವ ಗೆಲುವಿನ ಬಲ, ವಿಶ್ವಾಸದೊಂದಿಗೆ ನಾವು ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಮುಂದಾಗುತ್ತಿದ್ದೇವೆ; ಮೂರು ರಾಜ್ಯಗಳನ್ನು ಜಯಿಸಿರುವ ನಮ್ಮಲ್ಲೀಗ ಹೊಸ ಭರವಸೆ, ಹೊಸ ವಿಶ್ವಾಸ ತುಂಬಿಕೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸಂಸದೀಯ ಪಕ್ಷದ ಮಹಾ ಸಭೆಯಲ್ಲಿ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌, ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಗುಲಾಂ ನಬೀ ಆಜಾದ್‌ ಮತ್ತು ಇತರ ಪ್ರಮುಖ ಪಾಲ್ಗೊಂಡಿದ್ದಾರೆ.