ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ವರ್ಷದಲ್ಲಿ22 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ರಾಹುಲ್ಗಾಂಧಿ -Vishwanews24
ನವದೆಹಲಿ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ವರ್ಷದಲ್ಲಿ 22 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಪುನರುಚ್ಚರಿಸಿದ್ದಾರೆ.
ರಾಜಸ್ಥಾನದ ದುಂಗರ್ಪುರ್ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ಐದು ವರ್ಷಗಳಲ್ಲಿ ದೇಶದ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವುದಾಗಿ ತಿಳಿಸಿದರು.
ಬಡವರಿಗೆ ವಾರ್ಷಿಕ 72 ಸಾವಿರ ರುಪಾಯಿ ಕನಿಷ್ಠ ಆದಾಯ, ನೂತನ ಜಿಎಸ್ ಟಿ ಜಾರಿ, ನೀತಿ ಆಯೋಗ ರದ್ದು, ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಮೂರು ವರ್ಷ ತೆರಿಗೆ ವಿನಾಯ್ತಿ ಭರವಸೆ ನೀಡಿದ್ದ ರಾಹುಲ್ ಗಾಂಧಿ, ಇದೀಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾರ್ಚ್ 31, 2020ರೊಳಗೆ ಖಾಲಿ ಇರುವ 20 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಎಂದಿನಂತೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಮೋದಿ ಉದ್ಯೋಗ ಸೃಷ್ಟಿಸಿಲ್ಲ. ಬಡತನ ನಿರ್ಮೂಲನೆ ಮಾಡಿಲ್ಲ, ರೈತರ ಜೀವನ ಮಟ್ಟ ಸುಧಾರಿಸಿಲ್ಲ. ಐದು ವರ್ಷ ಭರವಸೆ ನೀಡುವುದರಲ್ಲೇ ಕಾಲ ಕಳೆದರು ಟೀಕಿಸಿದರು.
