ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮ್ ಅಭ್ಯರ್ಥಿಗಳಿಗೆ ಲೋಕಸಭಾ ಟಿಕೆಟ್ ನೀಡಲು ಜನಾರ್ಧನ ಪೂಜಾರಿ ಬೆಂಬಲ

Featured, ದಕ್ಷಿಣ ಕನ್ನಡ

ಮಂಗಳೂರು, : ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂಬ ಕೆಲ ಮುಸ್ಲಿಂ ನಾಯಕರ ಬೇಡಿಕೆಗೆ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಬೆಂಬಲ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದು, ಇವರನ್ನು ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಯಾವುದೇ ಸ್ಥಾನಮಾನಗಳು ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಈ ಸಾರಿಯ ಲೋಕಸಭಾ ಟಿಕೆಟ್ ಮುಸ್ಲಿಮ್ ಅಭ್ಯರ್ಥಿಗೆ ನೀಡಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಮುಸ್ಲಿಂ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು ಸಭೆ ನಡೆಸಿ ತಮ್ಮ ಹಕ್ಕೊತ್ತಾಯ ಮಾಡಿರುವುದು ನ್ಯಾಯಯುತ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮುಸ್ಲಿಂ ನಾಯಕರು ಸುಮ್ಮನೆ  ಕುಳಿತುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದಕ್ಕಾಗಿ ದೊಡ್ಡ ಹೋರಾಟ ನಡೆಸಿ. ಇಲ್ಲದಿದ್ದರೆ ನಿಮಗೆ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬೇಕು ಎಂದು ಈ ಹಿಂದೆಯೂ ಮಾತುಗಳು ಕೇಳಿಬರುತ್ತಿತ್ತು. ಆದರೆ ಅದಕ್ಕೆ ಯಾವುದೇ ಮನ್ನಣೆ ಸಿಕ್ಕಿರಲಿಲ್ಲ. ದಶಕಗಳ ಹಿಂದಿನಿಂದಲೇ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆಗಳು ಕೇಳಿ ಬರುತ್ತಿದ್ದು, ಈ ಕುರಿತಾದಂತೆ ಹೋರಾಟ ನಡೆಸಬೇಕು ಎಂದು ಜನಾರ್ದನ ಪೂಜಾರಿಯವರು ತಿಳಿಸಿದ್ದಾರೆ..