ಕಾಂಗ್ರೆಸ್ ಸಿದ್ದರಾಮಯ್ಯರನ್ನು ಕೈ ಬಿಟ್ಟರು ನಾವು ಬಿಡಲ್ಲ : ಸಿ.ಟಿ.ರವಿ -Vishwanews24
ಮೈಸೂರು: ಸಿದ್ದರಾಮಯ್ಯರನ್ನು ಕಾಂಗ್ರೆಸ್ ಕೈ ಬಿಟ್ಟರೂ ನಾವು ಅವರ ಕೈ ಬಿಡಲ್ಲ, ಅವರ ಜೊತೆ ನಾನು ದಿನನಿತ್ಯ ಸಂಪರ್ಕದಲ್ಲಿದ್ದೇನೆ, ಅವರನ್ನು ಆಹ್ವಾನಿಸಿಯೇ ದಸರಾ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ. ಅವರು ಕಾಲೆಳೆದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೈಸೂರಿನವರಾಗಿದ್ದು, ಅವರೇ ಅತಿಥಿ. ಕಾಂಗ್ರೆಸ್ ಅವರನ್ನು ಕೈ ಬಿಟ್ಟರು ನಾವು ಬಿಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಡಿಕೆಶಿ ಬಂಧನ ಸಮುದಾಯದ ವಿರುದ್ಧ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ್ದು, ಅದರೆ ನಾನು ಕೂಡ ಒಕ್ಕಲಿಗ ಸಮುದಾಯದವನಾಗಿದ್ದು, ನಾನು ನನ್ನ ಸಮುದಾಯದವರಿಗೆ ಹೇಳುವುದೇನೆಂದರೆ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಭಾವನಾತ್ಮಕವಾಗಿ ಯೋಚನೆ ಮಾಡಬೇಡಿ, ವಾಸ್ತವಿಕವಾಗಿ ಯೋಚನೆ ಮಾಡಿ. ಬಂಧನ ಸಮುದಾಯದ ವಿರುದ್ಧ ಎಂದು ಅಂದುಕೊಳ್ಳುವುದು ತಪ್ಪು ಎಂದರು.
ನನ್ನ ಮನೆಯಲ್ಲಿ 10 ಕೋಟಿ ದುಡ್ಡು ಸಿಕ್ಕರೆ ನಾನು ಪ್ರಾಮಾಣಿಕ ಅಂತಾ ಹೇಳಿಕೊಳ್ಳೋಕೆ ಆಗುತ್ತಾ? ನನ್ನ ಆಸ್ತಿ 18 ಎಕರೆ ಇದೆ. ಅದು 180 ಎಕರೆ ಆದರೆ ಅದಕ್ಕೆ ಉತ್ತರ ಕೊಡಬೇಕು. ಅದು 1880 ಎಕರೆ ಆದರೂ ಜನರಿಗೆ ಉತ್ತರ ಕೊಡಬಾರದು ಅಂದರೆ ಅದು ಕಾನೂನಿಗೂ ತದ್ವಿರುದ್ದ ಎಂದು ಕಿಡಿಕಾರಿದರು.
