ಕಾಪು :ಎಲ್ಲೂರು ಘನತ್ಯಾಜ್ಯ ಘಟಕಕ್ಕೆ ಬಡಾ ಗ್ರಾಮ ಪಂಚಾಯತ್ ನ ಕಸ ಹಾಕಲು ಬಿಡಬೇಡಿ : ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ಆಗ್ರಹ – vishwanews24
ಎಲ್ಲೂರು ಘನತ್ಯಾಜ್ಯ ಘಟಕಕ್ಕೆ ಬಡಾ ಗ್ರಾಮ ಪಂಚಾಯತ್ ನ ಕಸ ಹಾಕಲು ಬಿಡಬೇಡಿ : ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ಆಗ್ರಹ
ಕಾಪು: ತಾಲೂಕಿನ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಸಿಕಸವನ್ನು ವಿಲೇವಾರಿ ಮಾಡಲು ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳಾವಕಾಶ ವ್ಯವಸ್ಥೆ ಇಲ್ಲದ ಕಾರಣ ಕಾಪು ಪುರಸಭೆಯ ಎಲ್ಲೂರು ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಲು ಅವಕಾಶ ನೀಡಬೇಕೆಂದು ಮನವಿ ವಿಚಾರವಾಗಿ ಮಂಗಳವಾರ ಕಾಪು ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಈ ಸಂಧರ್ಭದಲ್ಲಿ ಸದಸ್ಯ ಅರುಣ್ ಶೆಟ್ಟಿ ಪಾದೂರು ಆಕ್ಷೇಪ ವ್ಯಕ್ತಪಡಿಸಿ ಸದ್ಯದ ಪರಿಸ್ಥಿತಿಯಲ್ಲಿ ಕಾಪು ಪುರಸಭೆ ಹೊರತು ಪಡಿಸಿ ಬೇರೆ ಯಾವುದೇ ಗ್ರಾಮ ಪಂಚಾಯತ್ ಗಳ ತ್ಯಾಜ್ಯವನ್ನು ಪುರಸಭಾ ಘನತ್ಯಾಜ್ಯ ಘಟಕದಲ್ಲಿ ಸೇರಿಸಿಕೊಂಡರೆ ಮುಂದಿನ ದಿನಗಳಲ್ಲಿ ಬಾರಿ ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಬಡಾ ಗ್ರಾಮಪಂಚಾಯತ್ ನ ಮನವಿ ಪುರಸ್ಕರಿಸಬಾರದೆಂದರು ಇದಕ್ಕೆ ಸದಸ್ಯೆ ಫರ್ಜಾನ ಧ್ವನಿಗೂಡಿಸಿದರು.
ಈ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತಾನಾಡಿ ಬಹುಗ್ರಾಮ ನೈರ್ಮಲ್ಯ ಯೋಜನೆಯಡಿಯಲ್ಲಿ ಸದ್ಯದ ಕಸ ವಿಲೇವಾರಿ ಘಟಕದಲ್ಲಿನ ಐದು ಎಕರೆ ಭೂಮಿಯನ್ನು ಬೇರೆ ಪಂಚಾಯತ್ ಗೆ ತ್ಯಾಜ್ಯ ನಿರ್ವಹಣೆ ಮಾಡಲು ಕಾನೂನು ಪ್ರಕಾರ ನೀಡಬೇಕಾಗುತ್ತೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುತ್ತೆಂದರು.
